ಮಂಗಳೂರು, ಸೆ.23: ಕೇಂದ್ರ ಸರ್ಕಾರ, ಕೇರಳ ಹೈಕೋರ್ಟ್ ಆದೇಶಗಳ ನಂತರವೂ ದಕ್ಷಿಣಕನ್ನಡ ಹಾಗೂ ಕಾಸರಗೋಡು ನಡುವೆ ಕೆಲವು ನಿರ್ಬಂಧಗಳು ಇನ್ನು ಮುಂದುವರೆದಿದೆ. ಆರು ತಿಂಗಳಿನಿಂದ ಬಂದ್ ಆಗಿರುವ ಸರಕಾರಿ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕ ಸೇತುಗಳೆಂದರೆ,ರೈಲ್ವೆ ಮತ್ತು ಬಸ್ ಗಳಾಗಿಡೇ.ಇದೀಗ ಈ ಎರಡೂ ಸೇವೆಗಳು ಬಂದ್ ಆಗಿದೆ.
ರೈಲ್ವೆ ಸೇವೆ ಆರಂಭಿಸಲು ಕೇಂದ್ರ ಸರಕಾರ ಈವರೆಗೆ ಗ್ರೀನ್ ಸಿಗ್ನಲ್ ನೀಡದಿದ್ದರೂ, ಬಸ್ ಸೇವೆ ಸೇರಿದಂತೆ ಇತರ ಪ್ರಯಾಣ ಸೇವೆಗಳ ಆರಂಭಕ್ಕೆ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಆದೇಶ ನೀಡಿದೆ. ಆದರೆ ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲಾಡಳಿತ ಮಾತ್ರ ಈ ಬಗ್ಗೆ ಗಾಢ ನಿರ್ಲಕ್ಷ್ಯ ವಹಿಸಿದೆ. ಕೊರೋನಾ ಹಿನ್ನಲೆ ಗಡಿಗಳನ್ನು ಬಂದ್ ಮಾಡಿಕೊಂಡಿದ್ದ ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲಾಡಳಿತ, ಕೇಂದ್ರ ಸರಕಾರ ಅನ್ಲಾಕ್ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿ ಅಂತರ ರಾಜ್ಯ ಸಂಚಾರಕ್ಕೆ ಇರುವ ನಿರ್ಬಂಧವನ್ನು ತೆಗೆದು ಹಾಕಿತ್ತು. ಆದರೂ ಕಾಸರಗೋಡು ಜಿಲ್ಲಾಡಳಿತ ಮಾತ್ರ ಕೇಂದ್ರ ಸರಕಾರದ ಆದೇಶನ್ನು ತಿರಸ್ಕರಿಸಿ ಜನರ ಸಂಚಾರಕ್ಕೆ ನಿರ್ಬಂಧ ಹೇರಿತ್ತು.
ನಂತರ ಬಿಜೆಪಿ ಮುಖಂಡರು ಕೇರಳ ಹೈಕೋರ್ಟ್ ಮೆಟ್ಟಿಲೇರಿ ಮುಕ್ತ ಸಂಚಾರಕ್ಕೆ ಆದೇಶ ತಂದರೂ ಸರಕಾರಿ ಬಸ್ ಸೇವೆ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿದೆ. ಕೇರಳ ಸರಕಾರ ರಸ್ತೆ ಸಂಚಾರಕ್ಕೆ ಮುಕ್ತ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಹೈಕೋರ್ಟ್ ತೀರ್ಪು ಪ್ರಕಟಿಸಿ ರಸ್ತೆ ಸಂಚಾರವನ್ನು ಮುಕ್ತಗೊಳಿಸಬೇಕು ಎಂದು ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಂಡು ಎಲ್ಲ ರಸ್ತೆಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ ಮುಕ್ತ ಸಂಚಾರಕ್ಕೆ ಅವಕಾಶ ಸಿಕ್ಕರೂ ಕೇರಳದ ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಉಭಯ ರಾಜ್ಯಗಳು ಇದುವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಸೆ.21ರಿಂದ ಬಸ್ ಆರಂಭಿಸಲಾಗುವುದು ಎಂದು ಕೇರಳ ಸಾರಿಗೆ ಸಂಸ್ಥೆ ತಿಳಿಸಿದ್ದರೂ ಬಸ್ ಸಂಚಾರ ಆರಂಭವಾಗಿಲ್ಲ. ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ನಡುವೆ 21 ಅಂತಾರಾಜ್ಯ ಸಂಪರ್ಕಿಸುವ ರಸ್ತೆಗಳಿದ್ದು, ಅವುಗಳಲ್ಲಿ 12 ಮಾರ್ಗಗಳಲ್ಲಿ ಅಂತರರಾಜ್ಯ ಬಸ್ ಸಂಚಾರವಾಗುತ್ತಿದೆ.
ಮಾರ್ಚ್ ತಿಂಗಳ ಅಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದಲೇ ಈ ಎಲ್ಲ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಸಡಿಲಿಸಿದ್ದರೂ ಕೇರಳ ಸರಕಾರ ಸಂಚಾರಕ್ಕೆ ಅನುವು ಮಾಡಿರಲಿಲ್ಲ. ಒಟ್ಟಾರೆ ಕಳೆದ ಆರು ತಿಂಗಳಿನಿಂದ ಬಸ್ ಸಂಚಾರ ಇಲ್ಲದೆ ಉಭಯ ರಾಜ್ಯದ ಸಾವಿರಾರು ಮಂದಿ ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.