ರಿಯಾದ್,ಸೆ.23: ಭಾರತದಿಂದ ಸೌದಿ ಅರೇಬಿಯಾ ಮತ್ತು ಹಿಂದಕ್ಕೆ ವಿಮಾನಗಳನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದೆ. ಮುಂದಿನ ಸೂಚನೆ ಬರುವವರೆಗೂ ಸೌದಿ ಅರೇಬಿಯಾದಿಂದ ಭಾರತಕ್ಕೆ ಮತ್ತು ಹಿಂದಕ್ಕೆ ಯಾವುದೇ ಸೇವೆಗಳು ಇರುವುದಿಲ್ಲ. ಸೌದಿಯ ಆದೇಶವು ವಂದೇ ಭಾರತ್ ವಿಮಾನಗಳ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದೊಂದಿಗೆ ವಾಯುಯಾನ ಸಂಬಂಧವನ್ನು ಸ್ಥಗಿತಗೊಳಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ.
ಇತರ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವವರು ಭೇಟಿಯ ಹಿಂದಿನ 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿರಬಾರದು. ಸೌದಿಯಲ್ಲಿ ಕೆಲಸ ಮಾಡುತ್ತಿರುವ ಮೂವತ್ತೆರಡು ಲಕ್ಷ ಭಾರತೀಯರು ಇದರಿಂದ ತೊಂದರೆಗೆ ಈಡಾಗಿದ್ದಾರೆ. ರಜೆಯಲ್ಲಿ ಊರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದವರು, ಕೆಲಸ ಕಳೆದುಕೊಂಡವರು, ಊರಿನಿಂದ ಸೌದಿಗೆ ಮರಳಲು ತಯಾರಿ ನಡೆಸುತ್ತಿದ್ದವರು ಸಂಕಷ್ಟಕ್ಕೀಡಾಗಿದ್ದಾರೆ.
ಸರ್ಕಾರೀ ಅಧಿಕಾರಿಗಳಿಗೆ ಪ್ರಯಾಣ ನಿರ್ಬಂಧಿಸಲಾಗಿಲ್ಲ. ಭಾರತವನ್ನು ಹೊರತುಪಡಿಸಿ, ಸೌದಿ ಅರೇಬಿಯಾವು ಅರ್ಜೆಂಟೀನಾ ಮತ್ತು ಬ್ರೆಜಿಲ್ಗೆ ವಿಮಾನ ಪ್ರಯಾಣವನ್ನು ಸಹ ನಿಷೇಧಿಸಿದೆ.