ಭಾರತದಲ್ಲಿ ದುರ್ಬಲ ವರ್ಗಗಳ ಪರ ಹೋರಾಟ ಮಾಡುವವರನ್ನು ಗುರಿಮಾಡಿ ಹಿಂಸಿಸಲಾಗುತ್ತಿದೆ. ಅವರ ಮೇಲೆ ಪೊಲೀಸ್ ಬಲ ಬಳಸಲಾಗುತ್ತಿದೆ. ಭಯೋತ್ಪಾದನೆಯಂತಹ ಪ್ರಕರಣಗಳನ್ನು ಹಾಕಿ ಕಟ್ಟಿಹಾಕಲಾಗುತ್ತಿದೆ. ಎಲ್ಲಕ್ಕಿಂತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಖಾನ್ ಪ್ರಸ್ತಾಪಿಸಿದ್ದಾರೆ.
ನವದೆಹಲಿ ; ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ದೇಶದಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಈ ಪೈಕಿ ಡಾ| ಕಫೀಲ್ ಖಾನ್ ಸಹ ಪ್ರತಿಭಟನೆ ನಡೆಸಿದ್ದ ವೇಳೆ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ, ಇತ್ತೀಚೆಗೆ ಅಲಹಾಬಾದ್ ಕೋರ್ಟ್ ಇವರ ಬಂಧನ ಕಾನೂನು ಬಾಹೀರ ಎಂದು ಅಭಿಪ್ರಾಯಪಟ್ಟು ಬಿಡುಗಡೆ ಮಾಡಿತ್ತು.
ಇದಲ್ಲದೆ ಕಳೆದ ಮೂರು ವರ್ಷಗಳಿಂದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ನಿರಂತರವಾಗಿ ಹೋರಾಟ ನಡೆಸುತ್ತಿರುವ ಡಾ| ಕಪೀಲ್ ಖಾನ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಹೋರಾಟವನ್ನು ವಿಶ್ವಸಂಸ್ಥೆವರೆಗೂ ಕೊಂಡ್ಯೊಯ್ದಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಪತ್ರ ಬರೆದಿರುವ ಅವರು, “ಭಾರತದಲ್ಲಿ ಅಂತರಾಷ್ಟ್ರೀಯ ನಿರ್ಧರಿತ ಮಾನವ ಹಕ್ಕುಗಳ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯೊಂದಿಗೆ ಭಿನ್ನಮತೀಯರನ್ನು ಹತ್ತಿಕ್ಕಲು ಎನ್‌ಎಸ್‌ಎ ಮತ್ತು ಯುಎಪಿಎಯಂತಹ ಕಠಿಣ ಕಾಯ್ದೆಗಳ ದುರ್ಬಳಕೆಯಾಗುತ್ತಿದೆ” ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಎರಡು ಬಾರಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿತರಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಂಡಿರುವ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ತಮ್ಮ ವಿರುದ್ಧ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
ಭಾರತದಲ್ಲಿ ದುರ್ಬಲ ವರ್ಗಗಳ ಪರ ಹೋರಾಟ ಮಾಡುವವರನ್ನು ಗುರಿಮಾಡಿ ಹಿಂಸಿಸಲಾಗುತ್ತಿದೆ. ಅವರ ಮೇಲೆ ಪೊಲೀಸ್ ಬಲ ಬಳಸಲಾಗುತ್ತಿದೆ. ಭಯೋತ್ಪಾದನೆಯಂತಹ ಪ್ರಕರಣಗಳನ್ನು ಹಾಕಿ ಕಟ್ಟಿಹಾಕಲಾಗುತ್ತಿದೆ. ಎಲ್ಲಕ್ಕಿಂತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ತಮ್ಮ ಪತ್ರದಲ್ಲಿ ಖಾನ್ ಪ್ರಸ್ತಾಪಿಸಿದ್ದಾರೆ.
ಜೂನ್ 25ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆಯು ಭಾರತ ಸರ್ಕಾರಕ್ಕೆ ಪತ್ರ ಬರೆದು 11 ಜನ ಹೋರಾಟಗಾರರ ಮೇಲಿನ ಪ್ರಭುತ್ವ ಹಿಂಸೆಯನ್ನು ನಿಲ್ಲಿಸುವಂತೆ ಒತ್ತಾಯಿಸಿತ್ತು. ಅದರಲ್ಲಿ ಡಾ.ಕಫೀಲ್ ಖಾನ್ ಮತ್ತು ಶಾರ್ಜಲ್ ಇಮಾಮ್ ಸಹ ಸೇರಿದ್ದರು. ಜೈಲಿನಲ್ಲಿರುವ ಈ ಹೋರಾಟಗಾರರನ್ನು ಹಿಂಸಿಸಲಾಗುತ್ತಿದೆ ಮತ್ತು ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ದೂರಿತ್ತು.
ಅಲ್ಲದೇ ಆಗಸ್ಟ್ 10, 2017ರ ತಮ್ಮ ಗೋರಕ್‌ಪುರದ ಬಿಆರ್‌ಡಿ ಆಸ್ಪತ್ರೆಯ ಪ್ರಕರಣದ ಬಗ್ಗೆಯೂ ತಮ್ಮ ಪತ್ರದಲ್ಲಿ ಖಾನ್ ಉಲ್ಲೇಖಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮ್ಲಜನಕ ಕೊರತೆ ಉಂಟಾಗಿ ಹಲವು ಮಕ್ಕಳು ಸಾವಿಗೀಡಾದ ಪರಿಸ್ಥಿತಿಯಲ್ಲಿ ತನ್ನನ್ನು ಹೇಗೆ ಆರೋಪಿಯನ್ನಾಗಿ ಮಾಡಲಾಯಿತು ಎಂದು ಅವರು ಬರೆದಿದ್ದಾರೆ. ಜೊತೆಗೆ 2018ರ ಏಪ್ರಿಲ್ 25ರ ಕೋರ್ಟ್ ತೀರ್ಪನ್ನು ಸಹ ಖಾನ್ ಉಲ್ಲೇಖಿಸಿ, “ವೈದ್ಯಕೀಯ ನಿರ್ಲಕ್ಷ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ” ಎಂದು ಕೋರ್ಟ್ ಹೇಳಿದೆ. ಆದರೂ ಯುಪಿ ಸರ್ಕಾರ ಮಾತ್ರ ತನ್ನನ್ನು ಗುರಿಯಾಗಿಸಿ ತೊಂದರೆ ನೀಡುವುದು ನಿಂತಿಲ್ಲ ಎಂದು ಖಾನ್ ಹೇಳಿದ್ದಾರೆ.
ಈ ಕುರಿತು ಇದುವರೆಗೂ 8 ಪ್ರತ್ಯೇಕ ತನಿಖೆಗಳು ನಡೆದಿವೆ. ಎಲ್ಲಾ ತನಿಖೆಗಳಲ್ಲಿಯೂ ತಾನು ನಿರ್ದೋಷಿ ಎಂಬುದು ಸಾಬೀತಾಗಿದೆ. ಆದರೆ ಯುಪಿ ಸರ್ಕಾರ ತನ್ನ ಮೇಲೆ ಹೇರಿರುವ ಅಮಾನತ್ತನ್ನು ಹಿಂಪಡೆದಿಲ್ಲ. ಇದು ರಾಜಕೀಯ ಹಗೆತನವನ್ನು ತೋರಿಸುತ್ತದೆ. ನಾನು ವೈದ್ಯನಾಗಿ ಸೇವೆಗೆ ಮರಳಲು ಸಿದ್ದನಿದ್ದೇನೆ. ಸರ್ಕಾರ ತನ್ನ ಮೇಲಿನ ಅಮಾನತ್ತು ಹಿಂಪಡೆಯಬೇಕು ಎಂದು ಸದ್ಯ ರಾಜಸ್ಥಾನದಲ್ಲಿ ವಾಸವಿರುವ ಡಾ.ಕಫೀಲ್ ಖಾನ್ ತಿಳಿಸಿದ್ದಾರೆ.
ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಡಾ| ಕಫೀಲ್ ಖಾನ್ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ತನ್ನ ಮೇಲೆ ಹೇಗೆ ದೈಹಿಕ ಹಲ್ಲೆ ನಡೆಸಿ ಹಿಂಸಿಸಿದ್ದರು. ಈ ಘಟನೆಗಳು ಹೇಗೆ ತನ್ನ ಕುಟುಂಬ ಸದಸ್ಯರ ಮಾನಸಿಕ ಖಿನ್ನತೆಗೆ ಕಾರಣವಾಗಿತ್ತು ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.