ಬೆಂಗಳೂರು: ರಾಜ್ಯದಲ್ಲಿ ಹಿಡಿತಕ್ಕೆ ಸಿಗದೆ ಕೊರೋನಾ ಸೋಂಕು ಉಲ್ಬಣಿಸುತ್ತಿದ್ದು ಇಂದು ಒಂದೇ ದಿನ 1272 ಸೋಂಕು ಪತ್ತೆಯಾಗಿ ಮತ್ತಷ್ಟು ಆತಂಕಕ್ಕೆ ಎಡೆಯಾಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಒಬ್ಬರ ಕುಟುಂಬದಲ್ಲಿ ಪಾಸಿಟಿವ್ ಕಂಡುಬಂದಿದ್ದು ಮುಖ್ಯ ನ್ಯಾಯ ಮೂರ್ತಿಗಳು ಸ್ವಯಂ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ಅನ್ಲಾಕ್ 2 ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದು ಮುಂದೆ ಬರುವ ಹಬ್ಬಗಳ ನಿಮಿತ್ತ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದು ಹೇಳಿದ್ದರು ಆದರೆ ದೇಶದಲ್ಲಿ ದಿನಂಪ್ರತಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಪರಿಶೀಲಿಸುವಾಗ ಮುಂದೆ ದೊಡ್ಡ ಮಟ್ಟದಲ್ಲಿ ಸಮುದಾಯದಲ್ಲಿ ಸೋಂಕು ಹರಡುವ ಭೀತಿಯನ್ನು ಕೊರೋನಾ ಉಂಟುಮಾಡುತ್ತಿದೆ.
ಬೆಂಗಳೂರು ನಗರ ವೊಂದರಲ್ಲೇ 735 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 84 ಸೋಂಕು ಪತ್ತೆಯಾಗಿದ್ದು ಜನತೆ ಆತಂಕದಲ್ಲೇ ದಿನ ದೂಡುವ ಪರಿಸ್ಥಿತಿ ಬಂದೊದಗಿದೆ. ಜುಲೈ 3 ರಿಂದ ಜುಲೈ 5 ರವರೆಗೆ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,514 ಕ್ಕೆ ಏರಿಕೆಯಾಗಿದೆ. ಇದರಲ್ಲಿ 8000 ಕ್ಕೂ ಅಧಿಕ ಸೋಂಕಿತರು ಪೂರ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.