janadhvani

Kannada Online News Paper

ಚೈನೀಸ್ ಆಪ್ ಬ್ಯಾನ್, ಅಮೆರಿಕಾ, ಕರೋನಾ ಮತ್ತು ಜಿಡಿಪಿ…!!!

ಟಿಕ್ ಟಾಕ್ ಆದಿಯಾಗಿ 59‌ ಚೀನಾ ಅಪ್ಲಿಕೇಶನ್ ಗಳು ಬ್ಯಾನ್ ಆದ ನಂತರ ಗಂಭೀರ ಬೆಳವಣಿಗೆಗಳು ನಡೆಯುತ್ತಿವೆ. ಚೀನಾ‌ ಬಹಳ ಎಚ್ಚರಿಕೆಯಿಂದ ದಾಳ ಉರುಳಿಸುತ್ತಿರುವಂತೆ ತೋರುತ್ತಿದೆ. 59 ಅಪ್ಲಿಕೇಷನ್ ಗಳ ಪರವಾಗಿ ಅಲ್ಲಿನ ಸಂಸ್ಥೆಗಳು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸುವುದಾಗಿ ಹೇಳಿಕೊಂಡಿವೆ. ಚೀನಾ ಸರ್ಕಾರದ ಪ್ರತಿನಿಧಿಗಳು ಸಹ ಬ್ಯಾನ್ ಮಾಡಿರುವುದು ಕಳವಳಕಾರಿಯಾಗಿದೆ ಎಂದಿದ್ದಾರೆ. ಚೀನಾದ ಪತ್ರಿಕೆಗಳು ಭಾರತ ಸರ್ಕಾರ ಚೀನಾದೊಂದಿಗೆ ‘ಆರ್ಥಿಕ ಯುದ್ಧ’ ಕ್ಕೆ ಮುಂದಾಗಿದೆ ಎಂದು ಟೀಕಿಸುವುದರ ಜತೆಗೆ ಭಾರತಕ್ಕೆ ಆ ಶಕ್ತಿ ಇದೆಯೇ ಎಂದು ಹಂಗಿಸುತ್ತಿವೆ.

ಈ ಎಕನಾಮಿಕ್ ವಾರ್ ಲಕ್ಷಣಗಳು ಕಂಡಿದ್ದು ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ನಂತರ.‌ ಟ್ರಂಪ್ ಬಂದು ಭಾರತಕ್ಕೆ ಕರೋನಾ‌ ಹಬ್ಬಿಸಿದ್ದು ಸಾಲದೆಂಬಂತೆ ಭಾರತ-ಚೀನಾ ನಡುವೆ ಹುಳಿಹಿಂಡಿ ಹೋಗಿಬಿಟ್ಟ. ಚೀನಾದ ಹುವಾಯ್ ಕಂಪೆನಿಯನ್ನು ಭಾರತದ 5G ಟ್ರಯಲ್ ನಿಂದ ದೂರವಿಡಬೇಕು ಎಂದು ಟ್ರಂಪ್ ಹಟ‌ ಹಿಡಿದುಬಿಟ್ಟ. ಭಾರತ ಸರ್ಕಾರ ಹುವಾಯ್ ದೂರವಿಡುವುದಾಗಿ ಹೇಳಲಿಲ್ಲವಾದರೂ ಜಿಯೋ ಮಾಲೀಕ ಮುಖೇಶ್ ಅಂಬಾನಿ, 5G ಟ್ರಯಲ್ ನಲ್ಲಿ ಹುವಾಯ್ ಮಾತ್ರವಲ್ಲ, ಒಂದೇ ಒಂದು ಚೀನಾ ಕಾಂಪೋನೆಂಟ್ ಬಳಸುವುದಿಲ್ಲ ಎಂದು ಸ್ವತಃ ಟ್ರಂಪ್ ಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತು ನೀಡಿದ. ಚೀನಾ‌ದ ಸುಪ್ರೀಂ‌ ಲೀಡರುಗಳಲ್ಲಿ ಚಡಪಡಿಕೆ‌ ಶುರುವಾಗಿದ್ದೇ ಆಗ. ಅದಾದ ನಂತರ ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಚೀನಾ ಸಂಸ್ಥೆಗಳ ಬಂಡವಾಳದ ಪ್ರಮಾಣ ಏರಿದ್ದನ್ನು ಗಮನಿಸಿದ ಭಾರತ ಸರ್ಕಾರ ದಿಢೀರನೆ FDI ನೀತಿಗೆ ತಿದ್ದುಪಡಿ ತಂದುಬಿಟ್ಟಿತು. ಯಾವುದೇ FDI ಆದರೂ ಕೇಂದ್ರ ಸರ್ಕಾರದ ಪರಿಶೀಲನೆಯ ನಂತರವೇ ಆಗಬೇಕು ಎಂದು ಹೊಸ ನಿಯಮಾವಳಿ ರಚಿಸಿತು. Once again, ಚೀನಾ ಚಡಪಡಿಸಿತು. ಇದಾದ ನಂತರ ಗಡಿಯಲ್ಲಿ ಆ ಭೀಕರ ಕಾದಾಟ ನಡೆದಿದ್ದು, ಇಪ್ಪತ್ತು ಮಂದಿ ಭಾರತೀಯ ಯೋಧರು ಹತರಾಗಿದ್ದು.

ಈಗ ಮುಂದಿನ ಹಂತದ ಸಮರಕ್ಕೆ ವೇದಿಕೆ ಸಜ್ಜುಗೊಂಡಿದೆ. ಚೀನೀ ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಲು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೊಟ್ಟಿರುವ ಕಾರಣ, ಭಾರತೀಯರ ಖಾಸಗಿ‌ ಮಾಹಿತಿಗಳು ದುರ್ಬಳಕೆಯಾಗಬಹುದು, ದೇಶದ ಸಾರ್ವಭೌಮತೆಗೆ ಧಕ್ಕೆಯಾಗಬಹುದು ಎಂಬುದು.‌ ಆದರೆ ಗಾಲ್ವಾನ್ ಕಣಿವೆಯಲ್ಲಿ ಆದ ಭೀಕರ ರಕ್ತಪಾತ, ಬ್ಯಾನ್ ಹಿಂದೆ ಇದೆ ಎಂದು ಯಾರಾದರೂ ಊಹಿಸಬಹುದು.

ವಿಷಯ ಈಗ ಅಷ್ಟು ಸರಳವಾಗಿ ಉಳಿದಿಲ್ಲ. ಭಾರತ ಬ್ಯಾನ್ ಮಾಡಿರುವ ಅಪ್ಲಿಕೇಷನ್ ಗಳಲ್ಲಿ ಬಹಳಷ್ಟು ಒಂದು ಬಿಲಿಯನ್ ಡಾಲರ್ ಮೌಲ್ಯಕ್ಕೂ ಹೆಚ್ಚಿನವು. ಮೇ ತಿಂಗಳ ಅಂಕಿಅಂಶದ ಪ್ರಕಾರ ಟಿಕ್ ಟಾಕ್, ಯೂಸಿ ಬ್ರೌಸರ್, ಕ್ಲಬ್ ಫ್ಯಾಕ್ಟರಿಗಳು ಒಟ್ಟಾರೆಯಾಗಿ 50 ಕೋಟಿ ಬಳಕೆದಾರರನ್ನು ಹೊಂದಿದ್ದವು ಎಂದರೆ ಅವುಗಳ ಪ್ರಭಾವವನ್ನು ನಾವು ಅಂದಾಜು ಮಾಡಬಹುದು. ಅದರಲ್ಲೂ ಭಾರತದಲ್ಲಿ 20 ಕೋಟಿ ಜನರ ಕೈಯಲ್ಲಿದ್ದ ಟಿಕ್ ಟಾಕ್ ಅತ್ಯಂತ ಜನಪ್ರಿಯ ಆಪ್. ಫೇಸ್ ಬುಕ್, ಯೂ ಟ್ಯೂಬ್ ಗಳನ್ನು‌ ಮೀರಿಸಿ‌ ಅದು ಬೆಳೆದಿತ್ತು. ಮುಂಬೈನಲ್ಲಿ ಅದರ ಕಚೇರಿ ಇದೆ. ನೂರಾರು ಭಾರತೀಯ‌ ತಂತ್ರಜ್ಞರು ಅದರಲ್ಲಿ ಕೆಲಸ ಮಾಡುತ್ತಿದ್ದರು.‌ ಟಿಕ್ ಟಾಕ್ ನ ಜನಪ್ರಿಯ ಬಳಕೆದಾರರು ಪೇ ರೋಲ್ ಒಳಗೆ ಬಂದಿದ್ದರು. ಒಂದೇ ಚಿಟಿಕೆ ಹೊಡೆಯುವಷ್ಟರಲ್ಲಿ ಇದೆಲ್ಲ ಬಂದ್ ಆಗಿದೆ. ಸಹಜವಾಗಿಯೇ ಅಮೆರಿಕ ಮೂಲದ ಟೆಕ್ ಕಂಪೆನಿಗಳು‌ ಸಂಭ್ರಮಿಸುತ್ತಿವೆ. ಭಾರತದ ಮಟ್ಟಿಗಂತೂ ಅಮೆರಿಕ ಅಪ್ಲಿಕೇಷನ್ ಗಳಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಎದುರಾಗಿದ್ದ ಕಾಂಪಿಟೇಷನ್ ಇಲ್ಲದಂತಾಗಿದೆ. ಅದಕ್ಕಾಗಿಯೇ ಟಿಕ್ ಟಾಕ್ ಬ್ಯಾನ್ ಸಂಭ್ರಮಿಸುವ ವಿಡಿಯೋಗಳು ಇವತ್ತು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ.

ನಾನು ಹಿಂದೆಯೇ ಬರೆದಂತೆ ಚೀನಾ ಮತ್ತು‌ ಅಮೆರಿಕ ನಡುವೆ ನಡೆಯುತ್ತಿರುವ ಆರ್ಥಿಕ ಯುದ್ಧದ ನಡುವೆ ನಾವು ಸಿಲುಕೊಂಡಿದ್ದೇವೆ. 5G ನಂತರದ ಭಾರತದ ಮಾರುಕಟ್ಟೆಯನ್ನು ಆವರಿಸಿಕೊಳ್ಳಲು ಎರಡೂ ದೇಶಗಳೂ ಜಟಾಪಟಿಗೆ ಬಿದ್ದಿವೆ. ಹೆಚ್ಚು ಕಡಿಮೆ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ವ್ಯವಹಾರವದು.‌ ಕಳೆದುಕೊಳ್ಳುವುದಕ್ಕೆ ಎರಡೂ ದೇಶಗಳೂ ತಯಾರಿಲ್ಲ. ನಾವು ಒಂದು ರೀತಿಯಲ್ಲಿ ಅಡಕತ್ತರಿಗೆ ಸಿಲುಕಿದ್ದೇವೆ. ಇಡೀ ತಂತ್ರಜ್ಞಾನದ ಜಗತ್ತು ‘ಡೇಟಾ ಈಸ್ ದಿ‌ ನ್ಯೂ ಆಯಿಲ್’ ಎಂದು ಡೇಟಾ ಹಿಂದೆ ಬಿದ್ದಿವೆ. ಚೀನಾ ನಮ್ಮ‌ ಡೇಟಾ ಸಂಗ್ರಹಿಸುವುದನ್ನು‌ ನಾವು ತಡೆಯಲು ಹೊರಟಿದ್ದೇವೆ, ಅದೇ ಉಸುರಿನಲ್ಲಿ‌ ಅಮೆರಿಕದ ಕೈಗೆ ಡೇಟಾ ಕೊಡಲು ಹೊರಟಿದ್ದೇವೆ.

ಸರ್ಕಾರ ಮುಂದೇನು ಮಾಡುತ್ತದೆ ಎಂಬುದು ನಿಜಕ್ಕೂ ಮಿಲಿಯನ್ ಡಾಲರ್ ಪ್ರಶ್ನೆ. IMF ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಭಾರತದ ಜಿಡಿಪಿ ಪಾತಾಳಕ್ಕೆ ಬಿದ್ದಿದೆ.‌ ಅದರ ಪ್ರೊಜೆಕ್ಷನ್ ಪ್ರಕಾರ 1.9% ಜಿಡಿಪಿಯು 2020ರಲ್ಲಿ ಮೈನಸ್ 4.5% ಆಗುವ ಲಕ್ಷಣಗಳಿವೆ. ಅಂದರೆ 6.4% ಇಳಿಮುಖ! ನಿಜ,‌ ಇದಕ್ಕೆ ಕರೋನಾ ಕೂಡ ಮುಖ್ಯ ಕಾರಣ. ಆದರೆ ಚೀನಾ,‌ ಅಮೆರಿಕದಂಥ ದೇಶಗಳು‌‌ ಕರೋನಾ‌ ಕಾಲದಲ್ಲೂ ಆರ್ಥಿಕವಾಗಿ ಹೆಚ್ಚು ಹೊಡೆತ ಬೀಳದಂತೆ ಎಚ್ಚರಿಕೆ ವಹಿಸುತ್ತಿವೆ. ಅವರಿಂದ ಸಾಧ್ಯವಾಗಿದ್ದು ನಮ್ಮಿಂದೇಕೆ ಆಗುತ್ತಿಲ್ಲ ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.‌ ಚೀನಾ‌ ಜತೆಗೆ ಆರಂಭಗೊಂಡಿರುವ ಆರ್ಥಿಕ ಸಮರವೂ ಕೆಟ್ಟ ಪರಿಣಾಮಗಳನ್ನು ಬೀರುವುದು ಖಂಡಿತ. ಚೀನಾ‌ ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾವಿರಾರು ಕೋಟಿ ರುಪಾಯಿಗಳಷ್ಟು FDI ಹೂಡಿದೆ.‌ ಈ ಪ್ರಮಾಣ‌ 2020ರಲ್ಲಿ ಶೇ. 50ರಷ್ಟು ಕುಸಿಯುವ ಸಾಧ್ಯತೆ ಇದೆ.‌ ಹೊಸ FDI ನೀತಿ, ಚೀನಾ ಅಪ್ಲಿಕೇಶನ್ ಗಳ ಬ್ಯಾನ್ FDI ಮೇಲೆ ಪರಿಣಾಮ‌ ಬೀರಲಿದೆ.‌

ಭಾರತ ಈಗಾಗಲೇ ಕರೋನಾದಿಂದ ತತ್ತರಿಸಿಹೋಗಿದೆ.‌ ಅದರ ನಡುವೆ ಈ ಆರ್ಥಿಕ ಸಮರ. ಬಾಯ್ ಕಾಟ್ ಚೀನಾ ಕೂಗು ಕೂಗುತ್ತಿರುವ ಅಲ್ಟ್ರಾ ನ್ಯಾಷನಲಿಸ್ಟ್ ಗಳನ್ನು ಸಮಾಧಾನ ಪಡಿಸಲೇಬೇಕಾದ ಅನಿವಾರ್ಯತೆ ಮೋದಿ ಸರ್ಕಾರಕ್ಕಿದೆ. ಯಾಕೆಂದರೆ ಇದು ಒಂದು ಬಗೆಯ ಹುಲಿ ಸವಾರಿ. ಈ ಅಲ್ಟ್ರಾ ನ್ಯಾಷನಲಿಸ್ಟ್ ಗಳನ್ನು ಮುದ್ದು ಮಾಡಿ ಸಾಕಿಕೊಂಡಿರುವುದೇ ಮೋದಿ ಸರ್ಕಾರ. ಅದರ ಜತೆಜತೆಗೆ ಭಾರತದ ಆರ್ಥಿಕತೆಯನ್ನು ಮುನ್ನಡೆಸಬೇಕಾದ ಗುರುತರ ಜವಾಬ್ದಾರಿಯೂ ಅದಕ್ಕಿದೆ. ಸದ್ಯದ ಮಟ್ಟಿಗಂತೂ ಸರ್ಕಾರ ಮೊದಲ ಆದ್ಯತೆಯಾಗಿ ಅಲ್ಟ್ರಾ ನ್ಯಾಷನಲಿಸ್ಟ್ ಗಳ ಜತೆ ನಿಂತಿದೆ. ಆದರೆ ಇದು ಬಹಳ ಕಾಲ ಸಾಧ್ಯವೇ? ಉತ್ತರ ಕೊಡುವವರು ಯಾರು?

ಲೇಖಕರು: ದಿನೇಶ್ ಕುಮಾರ್ ದಿನೂ

error: Content is protected !! Not allowed copy content from janadhvani.com