ಪರೀಕ್ಷೆ ನಡೆಸಿದರೆ ಎಂಟು ಲಕ್ಷ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ 10 ಲಕ್ಷ ಜನ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಕೊರೊನಾ ಸೋಂಕು ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಹೀಗಾಗಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರು, ಜೂ.20- ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಹೋರಾಟ ಮುಂದುವರಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಾಳೆಯಿಂದ ಶಿಕ್ಷಣ ಸಚಿವರ ನಿವಾಸದ ಎದುರು ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಜೂನ್ 25ರಿಂದ ಪ್ರಾರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗ್ರಹಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಎದುರು ಪ್ರತಿಭಟನೆ ನಡೆಸಿ ನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೊರೊನಾ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಎಷ್ಟು ಸಮಂಜಸ. ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಪರೀಕ್ಷೆಯನ್ನು ರದ್ದುಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ನಾವು ಹಲವಾರು ಹೋರಾಟಗಳನ್ನು ಮಾಡಿದ್ದೇವೆ.ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.
ಪರೀಕ್ಷೆ ನಡೆಸಿದರೆ ಎಂಟು ಲಕ್ಷ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ 10 ಲಕ್ಷ ಜನ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಕೊರೊನಾ ಸೋಂಕು ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಇದೆ. ಹೀಗಾಗಿ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ನಾಳೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ನಿವಾಸದೆದುರು ಸತ್ಯಾಗ್ರಹ ನಡೆಸುವುದಾಗಿ ಅವರು ತಿಳಿಸಿದರು. ಕೇವಲ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅಷ್ಟೆ ಅಲ್ಲ, ಎಂಜಿನಿಯರಿಂಗ್, ಪದವಿ ಸೇರಿದಂತೆ ಈ ವರ್ಷದ ಎಲ್ಲ ಪರೀಕ್ಷೆಗಳನ್ನೂ ರದ್ದು ಮಾಡಬೇಕೆಂದು ಅವರು ಒತ್ತಾಯಿಸಿದರು.