janadhvani

Kannada Online News Paper

ಬೆಂಬಿಡದ ಕೊರೋನಾ ಹಾಗೂ ಓಪನ್ ಆಗುತ್ತಿರುವ ಮಸೀದಿಗಳು

✍️mkm ಕಾಮಿಲ್ ಸಖಾಫಿ ಕೊಡಂಗಾಯಿ_

ಕೋವಿಡ್-19 ಕಾರಣ ಕಳೆದ ಎರಡು ತಿಂಗಳುಗಳ ಹಿಂದೆಯೇ ದೇಶ ವಿದೇಶಗಳ ಎಲ್ಲಾ ಮಸೀದಿಗಳ ಬಾಗಿಲುಗಳು ಮುಚ್ಚಲ್ಪಟ್ಟಿದ್ದುವು. ಸತ್ಯ ವಿಶ್ವಾಸಿಗಳು ಮತ್ತು ಮಸೀದಿಗಳು ಅವಿನಾಭಾವ ಸಂಬಂಧದ ಪ್ರತೀಕವಾಗಿದೆ. ಹೃದಯದಲ್ಲಿ ಸತ್ಯ ವಿಶ್ವಾಸವು ಅಣುವಿನಷ್ಟು ಗಾತ್ರವಿದ್ದರೂ ಆತನು ಮಸೀದಿಯನ್ನು ಗೌರವಿಸುವನು. ಮತ್ತು ಮಸೀದಿಗೆ ಆರಾಧನೆಗಾಗಿ ತೆರಳಲು ಪ್ರಯತ್ನಿಸುವನು. ವ್ಯಾಪಾರ ಮತ್ತಿತರ ಕಾರ್ಯಚಟುವಟಿಕೆಗಳಿಗಾಗಿ ಊರು ಬಿಟ್ಟು ತೆರಳಿದರೂ ಬಾಂಗಿನ ಕರೆ ಕೇಳುವಾಗ ಮಸೀದಿಗೆ ಬಂದು ತಲುಪುವ ಬಹಳಷ್ಟು ಜನರನ್ನು ಕಾಣಲು ಸಾಧ್ಯವಾಗುತ್ತದೆ.

ಜನರು ಹೆಚ್ಚಾಗಿ ಅವರ ಅವಶ್ಯಕತೆಗಳಿಗೆ ಪಟ್ಟಣಗಳನ್ನೇ ಆಯ್ಕೆ ಮಾಡುವುದರಿಂದ ಹಗಲು ಸಮಯದ ನಮಾಜುಗಳಿಗೆ ಪಟ್ಟಣಗಳಲ್ಲಿರುವ ಮಸೀದಿಗಳು ಬಹಳಷ್ಟು ಜನರಿಂದ ತುಂಬಿ ತುಳುಕುತ್ತದೆ. ಇತ್ತೀಚಿನ ದಿನಗಳಲ್ಲಿ ಎಷ್ಟೇ ಒತ್ತಡವಿದ್ದರೂ ನಮಾಜಿಗಾಗಿ ಜನರು ಸಮಯವನ್ನು ಮೀಸಲಿಡುವುದು ಕಾಣಲು ಸಾಧ್ಯವಾಗುತ್ತದೆ.! ಫ್ಯಾಮಿಲಿ ಸಮೇತ ನಗರಗಳಿಗೆ ಬರುವ ಜನರು ಸ್ತ್ರೀಯರಿಗಾಗಿ ಪ್ರತ್ಯೇಕ ನಮಾಜಿನ ವ್ಯವಸ್ಥೆಗಳಿರುವ ಸ್ಥಳಗಳಲ್ಲಿ ಅವರವರ ಮಹಿಳೆಯರನ್ನು ನಮಾಜಿಗೆ ತಲುಪಿಸಿ, ಮಸೀದಿಗಳನ್ನು ತಮ್ಮ ನಮಾಜಿಗಾಗಿ ಉಪಯೋಗಿಸುತ್ತಾರೆ. ಪುರುಷರು ಆರಾಧನೆಯ ಕೇಂದ್ರವಾಗಿ ಮಸೀದಿಗಳನ್ನೇ ಬಳಸುವುದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಕೊರೋನಾ ತಡೆದ ಆರಾಧನೆಗಳು

ಪುಣ್ಯಗಳ ಕೊಯ್ಲು ಕಾಲವೆಂದು ವಿಶೇಷಿಸಲ್ಪಡುವ ಪವಿತ್ರ ರಮಳಾನ್ ತಿಂಗಳು ಸಲಾಂ ಹೇಳಿ ಹೊರಟು ಹೋಗಿದೆ. ಇಂದು ಬದುಕಿರುವ ಜನರೆಲ್ಲರೂ ಅವರ ಬದುಕಿನಲ್ಲಿ ಮಸೀದಿಯ ಆರಾಧನೆಗಳಿಂದ ವಂಚಿತರಾಗಿದ್ದು ಇದುವೇ ಮೊದಲ ಬಾರಿಯಾಗಿರುತ್ತದೆ. ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಏಪಿ ಉಸ್ತಾದರವರು ಈ ಹಿಂದೆ ಹೇಳಿದ್ದರು : ನನ್ನ ಬದುಕಿನಲ್ಲಿ ಮೊದಲ ಬಾರಿ ಪವಿತ್ರ ರಮಳಾನ್ ತಿಂಗಳ ಆರಾಧನೆಗಳು ಮಸೀದಿಯಿಂದ ನಷ್ಟವಾಗಿದೆ. ಅಂದರೆ ಇದು ಪ್ರತಿಯೊಬ್ಬರ ಅನುಭವದ ಮಾತಾಗಿರುತ್ತದೆ.

ಮಸೀದಿಗಳಿಂದ ಸಿಗುವ ಪುಣ್ಯಗಳು ದುಪ್ಪಟ್ಟಾಗಿರುತ್ತದೆ. ಅದರಲ್ಲೂ ರಮಳಾನ್ ತಿಂಗಳು ಕುರ್ಆನ್ ಪಾರಾಯಣ, ಇಅ್’ತಿಕಾಫ್, ಪ್ರಾರ್ಥನಾ ಮಜ್ಲಿಸ್, ನಮಾಜು ಮುಂತಾದ ಆರಾಧನೆಗಳನ್ನು ಪುರುಷರು ಹೆಚ್ಚಾಗಿ ಮಸೀದಿಗಳಲ್ಲೇ ನಿರ್ವಹಿಸುತ್ತಾರೆ. ಮಾರಕವಾದ ಕೋವಿಡ್ 19 ಹರಡಿದ ಕಾರಣದಿಂದ ಕಳೆದ ರಮಳಾನ್ ತಿಂಗಳಲ್ಲಿ ಪೂರ್ತಿಯಾಗಿ ಎಲ್ಲಾ ಮಸೀದಿಗಳು ಮುಚ್ಚಲ್ಪಟ್ಟಿತ್ತು. ಆದ ಕಾರಣ ಮಸೀದಿಗಳಿಂದ ಪ್ರತ್ಯಕ್ಷವಾಗಿ ಸಿಗುತ್ತಿರುವ ಪ್ರತಿಫಲಗಳು ನಷ್ಟವಾಗಿದ್ದು, ಸತ್ಯ ವಿಶ್ವಾಸಿಗಳ ಸಂಕಲ್ಪಗಳಿಗೆ ಪ್ರತಿಫಲ ಸಿಗುತ್ತದೆಯೆಂಬ ಹದೀಸಿನ ಆಧಾರದಲ್ಲಿ ಮಸೀದಿಗಳಿಂದ ಆರಾಧನೆಗಳು ನಷ್ಟವಾಗಿದ್ದರೂ ಅದರ ಪ್ರತಿಫಲವು ಸಿಗಬಹುದೆಂಬ ವಿಶ್ವಾಸದಲ್ಲಿ ಮುಸ್ಲಿಮರು ಅಷ್ಟರಮಟ್ಟಿಗೆ ಸಂತೋಷಪಟ್ಟಿದ್ದಾರೆ.!!

ಓಪನ್ ಆಗುತ್ತಿರುವ ಮಸೀದಿಗಳು

ದೇಶ ವಿದೇಶಗಳಲ್ಲಿ ಕೊರೋನಾ ವೈರಸ್ ತನ್ನ ದಾಳಿಯನ್ನು ನಿಲ್ಲಿಸಲಿಲ್ಲ. ಆದರೂ ಜನರು ತಮ್ಮ ಎಲ್ಲಾ ಕಾರ್ಯಗಳಿಂದ ವಂಚಿತರಾಗುವುದನ್ನು ತಡೆಗಟ್ಟಲು ನಮ್ಮ ಸರಕಾರವು ಪ್ರತಿಯೊಂದು ಕೇಂದ್ರಗಳನ್ನು ಓಪನ್ ಮಾಡಿಕೊಡಲು ಬಯಸಿದೆ. ಆ ಪೈಕಿ ಮಸೀದಿ ಕೂಡ ಒಂದಾಗಿರುತ್ತದೆ. ಕೊರೋನಾ ವೈರಸಿನ ಸೋಂಕು ವೇಗವಾಗಿ ಹರಡುತ್ತಿದ್ದು, ಹಲವು ರೀತಿಯಲ್ಲಿ ಅದು ಮತ್ತೊಬ್ಬರನ್ನು ದಾಳಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆರಾಧನೆಗಾಗಿ ಮಸೀದಿಗಳನ್ನು ತೆರೆಯಲು ಸರ್ಕಾರ ಸಮ್ಮತಿಸಿರುವುದನ್ನು ನಾವೆಲ್ಲರೂ ಮುಕ್ತವಾಗಿ ಸ್ವಾಗತಿಸುತ್ತಿದ್ದೇವೆ. ಆದರೆ ಕೊರೋನಾ ಭೀತಿಯಿಂದ ನಮ್ಮ ಜನರು ಇನ್ನೂ ಮುಕ್ತವಾಗಿಲ್ಲದ ಕಾರಣ ಸಾರ್ವಜನಿಕ ಜನರು ನಮಾಜಿಗಾಗಿ ಮಸೀದಿಗಳಿಗೆ ಬರುವುದರಿಂದ ಓಪನ್ ಮಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತವೆಂಬುದನ್ನು ಮನದಟ್ಟು ಮಾಡಬೇಕಾಗುತ್ತದೆ.!

ಅದರಲ್ಲೂ ಪಟ್ಟಣದ ಮಸೀದಿಗಳಿಗೆ ವಿವಿಧೆಡೆಗಳಿಂದ ಆಗಮಿಸುವ ಜನರು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆ ಪೈಕಿ ಸೋಂಕಿತರು ಕೂಡ ಇರಲು ಸಾಧ್ಯತೆ ಇದೆ. ಅಂತಹವರು ಮಸೀದಿಗೆ ನಮಾಜಿಗಾಗಿ ಬರುವುದರಿಂದ ಪ್ರಸ್ತುತ ವೈರಸ್ ಇನ್ನೊಬ್ಬರನ್ನು ದಾಳಿ ಮಾಡುವುದೇ ಅಧಿಕವಾಗಿರುತ್ತದೆ. ಈ ವಿಷಯದಲ್ಲಿ ಪ್ರತಿ ಮೊಹಲ್ಲಾ ಸಮಿತಿಗಳು ಅತ್ಯಂತ ಜಾಗರೂಕರಾಗಿರಬೇಕು.
ಬಹುಮಾನ್ಯರಾದ ಸುಲ್ತಾನುಲ್ ಉಲಮಾ ಉಸ್ತಾದರು ಹೇಳಿದಂತೆ ಪಟ್ಟಣಗಳ ಮಸೀದಿಗಳನ್ನು ಈಗಿನ ಸ್ಥಿತಿಯಲ್ಲಿ ಓಪನ್ ಮಾಡದಿರುವುದೇ ಒಳ್ಳೆಯದು. ಇನ್ನಿತರ ಕಡೆಗಳಲ್ಲಿ ಸರ್ಕಾರ ಮತ್ತು ನಮ್ಮ ಖಾಝಿಗಳು ತಿಳಿಸಿರುವ ನಿಬಂಧನೆಗಳನ್ನು ಕಾಪಾಡಿಕೊಂಡು ತೆರೆದು ಆರಾಧನೆಗೆ ಅವಕಾಶ ಮಾಡಿ ಕೊಡುವುದಾದರೂ ಹತ್ತು ವರ್ಷಕ್ಕಿಂತ ಮೇಲ್ಪಟ್ಟ 65 ವರ್ಷಕ್ಕಿಂತ ಕೆಳಗಿನ ಪುರುಷರಿಗೆ ಮಾತ್ರ ಅವಕಾಶ ನೀಡಬೇಕು.
ಅದರಲ್ಲೂ ಕುಳಿತು ನಮಾಝ್ ಮಾಡುವವರು, ರೋಗಿಗಳು, ಹೊರಗಿನಿಂದ ಬರುವವರು ಮುಂತಾದವರಿಗೆ ಅವಕಾಶ ನೀಡದಿರುವುದು ಸ್ವಸ್ಥ ಸಮಾಜದ ಮುನ್ನಡೆಗೆ ಒಳಿತಾಗಬಹುದು.

ಶುಕ್ರವಾರವೂ ನಮಾಝ್ ನಡೆಯಲಿಲ್ಲ

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳುತ್ತಾರೆ : ದಿನಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಶುಕ್ರವಾರವಾಗಿರುತ್ತದೆ. ಬಡ ಮತ್ತು ನಿರ್ಗತಿಕ ವಿಭಾಗಗಳ ಹಜ್ಜ್ ಎಂದು ಬಣ್ಣಿಸಲ್ಪಟ್ಟ ಈ ದಿವಸದ ಮಧ್ಯಾಹ್ನದ ನಮಾಜು ಮಸೀದಿಯಲ್ಲೇ ಆಗಿರಬೇಕೆಂದು ಇಸ್ಲಾಮಿನ ಶಾಸನವಾಗಿರುತ್ತದೆ. ಶ್ರೀಮಂತ- ಬಡವ, ಕರಿಯ-ಬಿಳಿಯ, ಹಿರಿಯ-ಕಿರಿಯ ಎಂಬ ವ್ಯತ್ಯಾಸವಿಲ್ಲದೆ ಎಲ್ಲಾ ಪುರುಷರು ಒಂದೆಡೆಯೇ ಸೇರಿ ಒಂದೇ ವೇಳೆಯಲ್ಲಿ ನಮಾಝ್ ನಿರ್ವಹಿಸಬೇಕು.

ಶುಕ್ರವಾರದ ನಮಾಜಿಗಾಗಿ ಬಹಳಷ್ಟು ಜನರು ನೂರಾರು ರೂಪಾಯಿಗಳನ್ನು ಖರ್ಚು ಮಾಡಿ ವಾಹನದಲ್ಲಿ ತೆರಳಬೇಕಾಗುತ್ತದೆ. ದೊಡ್ಡ ದೊಡ್ಡ ಔತಣಕೂಟಗಳನ್ನು ಮಿಸ್ ಮಾಡುತ್ತಾರೆ. ವ್ಯಾಪಾರ- ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ನಮಾಜನ್ನು ಜುಮುಆ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ. ಜುಮುಅ ಅಂದರೆ ಒಗ್ಗೂಡುವುದು. ಅಂದರೆ ಎಲ್ಲರೂ ಒಟ್ಟಾಗಿ ನಮಾಝ್ ನಿರ್ವಹಿಸಬೇಕೆಂಬುದು ಈ ಹೆಸರಿನ ತಾತ್ಪರ್ಯವಾಗಿರುತ್ತದೆ.

ಇತರ ದಿನಗಳಲ್ಲಿ ನಮಾಜಿಗಾಗಿ ಮಸೀದಿಗೆ ತೆರಳಲು ಸಾಧ್ಯವಿಲ್ಲದವರು ಕೂಡಾ ಶುಕ್ರವಾರದಂದು ಎಲ್ಲಾ ತ್ಯಾಗಗಳನ್ನು ಸಹಿಸಿ ಮಸೀದಿಗೆ ತೆರಳುವುದು ಇದರ ಮಹತ್ವವನ್ನು ಇನ್ನಷ್ಟು ತಿಳಿಸುತ್ತದೆ. ಜೀವನದಲ್ಲಿ ಒಮ್ಮೆಯೂ ಮುಸ್ಲಿಮರು ಶುಕ್ರವಾರದ ನಮಾಜನ್ನು ತಪ್ಪಿಸುವುದಿಲ್ಲ. ಪ್ರಸ್ತುತ ದಿನದ ಮಧ್ಯಾಹ್ನ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ. ಜುಮುಅ ನಮಾಝ್ ಮಿಸ್ ಆಗುವುದಾದರೆ ಕಡ್ಡಾಯ ಯಾತ್ರೆ ಹೋಗುವುದನ್ನು ಸಹಃ ಇಸ್ಲಾಂ ಧರ್ಮವು ನಿಷೇಧಿಸಿದೆ.

ಇದೆಲ್ಲವೂ ಆ ದಿನದ ಗೌರವ ಮತ್ತು ಶ್ರೇಷ್ಠತೆಯನ್ನು ಪರಿಗಣಿಸಿಯಾಗಿರುತ್ತದೆ.
ನೋವೆಲ್ ಕೊರೋನಾ ಹರಡುವುದನ್ನು ತಡೆಗಟ್ಟಲು ಮುಸ್ಲಿಮರು ಸತತ 11 ಜುಮುಅ ನಮಾಜುಗಳನ್ನು ಈಗಾಗಲೇ ಕೈಬಿಟ್ಟು ತ್ಯಾಗ ಮಾಡಿದ್ದಾರೆ. ಎಲ್ಲೆಡೆಯೂ ಎಲ್ಲರಿಗೂ ಆರೋಗ್ಯ ಸಿಗಲಿಯೆಂಬ ಪ್ರಾರ್ಥನೆಯಿಂದ ಇತರ ದಿವಸಗಳಂತೆ ಕಳೆದ 11 ಶುಕ್ರವಾರವೂ ಮಧ್ಯಾಹ್ನದ ನಮಾಝುಗಳನ್ನು ಮನೆಯಲ್ಲೇ ಮುಸ್ಲಿಮರು ನಿರ್ವಹಿಸುವ ಮೂಲಕ ಸರ್ಕಾರದ ಆದೇಶಗಳನ್ನು ಚಾಚೂ ತಪ್ಪದೆ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮುಸ್ಲಿಮರು ಸರಕಾರದ ಆದೇಶಗಳನ್ನು ಅನುಸರಿಸುವುದರ ಒಂದು ಉದಾಹರಣೆ ಮಾತ್ರವಾಗಿರುತ್ತದೆ.

ತಾತ್ಕಾಲಿಕವಾಗಿ ಕೈಬಿಡಬೇಕಾದ ಕಾರ್ಯಗಳು

ಹಿಂದೆ ಮಸೀದಿಗಳಲ್ಲಿ ನಿರ್ವಹಿಸುತ್ತಿದ್ದ ಹಲವು ಆರಾಧನೆಗಳನ್ನು ತಾತ್ಕಾಲಿಕವಾಗಿ ಕೈಬಿಡುವುದು ಸಮಾಜಕ್ಕೆ ಒಳ್ಳೆಯದಾಗಿದೆ. ಇಅ್’ತಿಕಾಫ್, ಕುರ್ಆನ್ ಪಾರಾಯಣ, ಆಧ್ಯಾತ್ಮಿಕ ಮಜ್ಲಿಸ್, ಸುನ್ನತ್ ನಮಾಝ್, ಬೋಧನಾ ತರಗತಿ ಮುಂತಾದ ಕಾರ್ಯಚಟುವಟಿಕೆಗಳು ಇಸ್ಲಾಮಿಕ್ ವೀಕ್ಷಣೆಯಲ್ಲಿ ಅತ್ಯಂತ ಮಹತ್ವವುಲ್ಲದ್ದು, ಈಗಿನ ಪರಿಸ್ಥಿತಿಯಲ್ಲಿ ಅವುಗಳೆಲ್ಲವನ್ನು ಮನೆಯಲ್ಲೇ ನಿರ್ವಹಿಸಬೇಕು. ಅದರೊಂದಿಗೆ ನಮಾಜಿಗಾಗಿ ಮಸೀದಿಗೆ ಬರುವವರು ತಮ್ಮ ಮನೆಯಲ್ಲಿಯೇ ಅಂಗ ಶುದ್ಧಿ ಮಾಡಿ ನಮಾಝ್ ಮಾಡುವ ಸ್ಥಳದಲ್ಲಿ ಹಾಕುವ ಬಟ್ಟೆ (ಮುಸಲ್ಲ)ಯನ್ನು ತರುವುದು ಕೂಡ ಒಳ್ಳೆಯದೇ ಆಗಿರುತ್ತದೆ.

ಬಾಂಗ್ ಕೇಳಿದ ಬಳಿಕವೇ ಮಸೀದಿಗೆ ಬಂದು ನಮಾಝ್ ಮುಗಿಸಿ ಕೂಡಲೇ ಮಸೀದಿಯಿಂದ ಹೊರಡುವುದು ಕೂಡ ಅನಿವಾರ್ಯವಾಗಿರುತ್ತದೆ. ಇನ್ನು ಮಸೀದಿಗಳಲ್ಲಿ ಅಝಾನ್ ಕೊಟ್ಟ ಕೂಡಲೇ ಬೇಗನೇ ಸಾಮೂಹಿಕ ನಮಾಜ್ ಆರಂಭಿ, ತ್ವರಿತವಾಗಿ ಮುಗಿಸುವುದು, ಸುನ್ನತ್ ನಮಾಜಿಗಾಗಿ ಅವರವರ ಮನೆಯನ್ನು ಉಪಯೋಗಿಸುವಂತೆ ಕರೆ ನೀಡುವುದು ಕೂಡ ಅಗತ್ಯವಾಗಿರುತ್ತದೆ.
ಒಟ್ಟಿನಲ್ಲಿ ಮಸೀದಿಗಳನ್ನು ವೈರಸ್ ಮುಕ್ತ ಆರಾಧನಾ ಕೇಂದ್ರವಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಹಾಗಾಗಲಿಯೆಂದು ಪ್ರಾರ್ಥಿಸೋಣ..!

error: Content is protected !! Not allowed copy content from janadhvani.com