janadhvani

Kannada Online News Paper

ಜೂ.9ರಿಂದ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಮತ್ತೆ ಆರಂಭ

ಮಂಗಳೂರು: ಕೊರೊನಾ ಲಾಕ್‌ಡೌನ್‌ ಸಂದರ್ಭ ಸ್ಥಳಾಂತರ ಮಾಡಿದ್ದ ಮಂಗಳೂರು ಸೆಂಟ್ರಲ್‌ ಮಾರುಕಟ್ಟೆ ವ್ಯವಹಾರವನ್ನು ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಮತ್ತೆ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಜೂ.9ರಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಮುಸ್ತಫಾ ಕುಂಞಿ ಹೇಳಿದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ 14 ದಿನಗಳ ಅವಧಿಗೆ ತರಕಾರಿ ಹಾಗೂ ಹಣ್ಣು ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಮನವಿ ಮಾಡಿದ ಕಾರಣ ಕೆಲವು ವ್ಯಾಪಾರಿಗಳು ತಾತ್ಕಾಲಿಕವಾಗಿ ವ್ಯಾಪಾರ ಸ್ಥಳಾಂತರಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮೂರು ತಿಂಗಳಿನಿಂದ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡಲಾಗದೆ ಮನೆಯಲ್ಲಿಯೇ ಉಳಿದಿದ್ದಾರೆ. ವ್ಯಾಪಾರವನ್ನೇ ನಂಬಿಕೊಂಡು ಸಂಸಾರ ಸಾಗಿಸಬೇಕಾದ್ದರಿಂದ ಎಂಟು ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಬ್ಯಾಂಕ್‌ ಸಾಲ, ಖಾಸಗಿ ಸಾಲಗಳ ಬಡ್ಡಿ ಕಟ್ಟಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ.

ಸದ್ಯ ಎಲ್ಲವೂ ಸಹಜತೆಯತ್ತ ಮರಳುತ್ತಿದೆ. ಹಾಗಾಗಿ ಮಂಗಳವಾರದಿಂದ ಸೆಂಟ್ರಲ್‌ ಮಾರುಕಟ್ಟೆಯ ಹೊರಗಿನ ಎಲ್ಲಸಗಟು ವ್ಯಾಪಾರಸ್ಥರು ತಮ್ಮ ವ್ಯವಹಾರ ಆರಂಭಿಸಲಿದ್ದಾರೆ. ಯಾರೂ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸದಂತೆ ಸಂಘ ನಿರ್ಣಯ ಕೈಗೊಂಡಿದೆ ಎಂದರು.

ಏ.7ರಂದು ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶ ಪ್ರಕಾರ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ, ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರಿಗಳು ಪಾಲಿಕೆ ಅನುಮತಿ ಮೇರೆಗೆ ಲಕ್ಷಾಂತರ ರೂ. ವ್ಯಯಿಸಿ ತಮ್ಮ ಕಟ್ಟಡ ನಿರ್ವಹಣೆ ಮಾಡಿದ್ದಾರೆ. ಈ ಎರಡೂ ಕಟ್ಟಡಗಳು ಬಲಿಷ್ಠವಾಗಿವೆ. ಈ ಆದೇಶವನ್ನು ಪ್ರಶ್ನಿಸಿ ವ್ಯಾಪಾರಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಾಲಯ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ದಾವೆ ನಡೆಸುತ್ತಿರುವ ಪಾಲಿಕೆಯಿಂದ ನಿಯುಕ್ತಿಗೊಂಡ ವಕೀಲರು ಕೂಡ ವ್ಯಾಪಾರಕ್ಕೆ ಯಾವುದೇ ಅಡ್ಡಿಪಡಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಹಾಗಾಗಿ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಯಾವುದೇ ತೊಂದರೆ ಇಲ್ಲ. ಈಗಾಗಲೇ ಜಿಲ್ಲಾಡಳಿತ, ಮನಪಾ, ಹಾಗೂ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದರು.
ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಪರವಾನಗಿ ಹೊಂದಿದ 151 ಸಗಟು ವ್ಯಾಪಾರಸ್ಥರು, 300ಕ್ಕೂ ಅಧಿಕ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಎಲ್ಲರೂ ಪಾಲಿಕೆಗೆ ಬಾಡಿಗೆ ಪಾವತಿಸಿ ವ್ಯಾಪಾರ ಮಾಡುತ್ತಿದ್ದರು. ಬಾಡಿಗೆ ಪಡೆದಿರುವ ಬಗ್ಗೆ ನಮ್ಮಲ್ಲಿಪುರಾವೆ ಇದೆ. ಅನಧಿಕೃತವಾಗಿದ್ದಲ್ಲಿ ಬಾಡಿಗೆ ಹೇಗೆ ಪಡೆಯಲಾಗುತ್ತಿತ್ತು. ಪರವಾನಗಿ ಹೇಗೆ ನೀಡಲಾಗಿದೆ ಎಂದು ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲಿಯಾನ್‌ ಹೇಳಿದರು.
ಮರ್ಚಂಟ್ಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಗಣೇಶ್‌, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಎ.ಜೆ. ಶೇಖರ್‌, ಕಾನೂನು ಸಲಹೆಗಾರ ಮನಮೋಹನ್‌ ಜೋಯ್ಸ್‌ ಉಪಸ್ಥಿತರಿದ್ದರು

error: Content is protected !! Not allowed copy content from janadhvani.com