ಬೆಂಗಳೂರು: ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 116 ಹೊಸ ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಇದರ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಿಂದ ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಪ್ರಕಾರ, 1578 ಕೇಸುಗಳ ಪೈಕಿ 570 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಿಂದಾಗಿ ಸದ್ಯ ರಾಜ್ಯದಲ್ಲಿ 966 ಸಕ್ರಿಯ ಕೋವಿಡ್-19 ಪ್ರಕರಣಗಳು ಇವೆ. ಈ ಎಲ್ಲಾ ಕೊರೋನಾ ಸೋಂಕಿತರಿಗೂ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೂ ಈ ಮಾರಕ ಕೊರೋನಾಗೆ 41 ಮಂದಿ ಬಲಿಯಾಗಿದ್ದಾರೆ. ನಿನ್ನೆಯಿಂದ ಇಲ್ಲಿಯತನಕ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ ಎಂಬುದು ಸಂತಸದ ಸಂಗತಿ.
ದೇಶದಲ್ಲಿ ಮಂಗಳವಾರ ಒಂದೇ ದಿನ 5,611 ಹೊಸ ಪ್ರಕರಣಗಳು ಪತ್ತೆಯಾಗಿವೆ. ಬುಧವಾರ 5,609 ಪ್ರಕರಣಗಳು ವರದಿಯಾಗಿವೆ. ಈಗ ನಿರಂತರವಾಗಿ ಎರಡು ದಿನ ದಿನವೊಂದರಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಇದಕ್ಕೂ ಮೊದಲು ಕಳೆದ ಭಾನುವಾರ ದಾಖಲಾಗಿದ್ದ 5,242 ಪ್ರಕರಣಗಳೇ ದಿನವೊಂದರಲ್ಲಿ ದಾಖಲಾದ ಅತಿ ಹೆಚ್ಚು ಎನಿಸಿತ್ತು. ಈಗ 5,609 ಪ್ರಕರಣಗಳು ದಾಖಲಾಗಿರುವುದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1,12,359ಕ್ಕೆ ಏರಿಕೆಯಾಗಿದೆ.