ಲಾಕ್ ಡೌನ್ ನಿಂದಾಗಿ ರಾಜ್ಯದ ಮಸೀದಿ-ಮದ್ರಸಗಳಿಗೆ ಬೀಗ ಬಿದ್ದಿದೆ. ಪ್ರಸ್ತುತ ಮಸೀದಿ ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಸಿಬ್ಬಂಧಿಗಳು ಕೂಡ ಮನೆಯಲ್ಲಿದ್ದಾರೆ. ಅವರಲ್ಲಿ ಮುಸ್ಲಿಂ ಸಮುದಾಯದ ಗೌರವಾನ್ವಿತ ಸ್ಥಾನದಲ್ಲಿರುವ ವಿದ್ವಾಂಸರು, ಮುಅಝ್ಝಿನ್ ಗಳೂ ಸೇರಿದ್ದಾರೆ.
ಲಾಕ್ ಡೌನ್ ಆರ್ಥಿಕವಾಗಿ ಪ್ರತೀ ಮೊಹಲ್ಲಾದಲ್ಲೂ ಪರಿಣಾಮ ಬೀರುತ್ತದೆ ಎಂಬುದು ಸತ್ಯವಾದರೂ ಈ ನೆಪದಲ್ಲಿ ಮಸೀದಿಯಲ್ಲಿ- ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿದ್ವಾಂಸರು, ಸಹಾಯಕರು, ಮುಅಝ್ಝಿನ್ ಮುಂತಾದವರ ವೇತನವನ್ನು ಕಡಿತಗೊಳಿಸುವುದು, ಅವರನ್ನು ಕೆಲಸದಿಂದ ತೆಗೆಯುವುದು ಈ ಸಮಯದಲ್ಲಿ ಎಲ್ಲಷ್ಟೂ ಸರಿಯಲ್ಲವೆಂದು ರಾಜ್ಯ ವಕ್ಫ್ ಮಂಡಳಿ ಸದಸ್ಯ ಜಿ.ಯಾಕೂಬ್ ಯೂಸುಫ್ ಅಭಿಪ್ರಾಯಿಸಿದ್ದಾರೆ.
ಮುಸ್ಲಿಂ ಸಮುದಾಯ ಬಹಳ ಹಿಂದಿನಿಂದಲೂ ವಿದ್ವಾಂಸರನ್ನು ಗೌರವಿಸುತ್ತಲೇ ಬಂದಿದೆ. ವಿದ್ವಾಂಸರು ಈ ಸಮುದಾಯದ ಆಸ್ಥಿ. ಸಮುದಾಯದ ಭವಿಷ್ಯ ಕೂಡ ಅವರೇ. ಸಮುದಾಯಕ್ಕೆ ನೇತೃತ್ವ ನೀಡಬೇಕಾಗಿರುವ, ಸಮಾಜಕ್ಕೆ ಧಾರ್ಮಿಕ ವಿದ್ಯಾಭ್ಯಾಸ, ಮಾರ್ಗದರ್ಶನ ನೀಡಬೇಕಾಗಿರುವ ಈ ವಿಭಾಗವನ್ನು ಪೋಷಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಬಾಧ್ಯತೆಯಾಗಿದೆ.
ದುರದೃಷ್ಟವಶಾತ್ ಸಮುದಾಯದಲ್ಲಿ ಅತ್ಯನ್ನತ ಸ್ಥಾನದಲ್ಲಿರಬೇಕಾಗಿದ್ದ ನಮ್ಮ ಉಲಮಾಗಳು ಇಂದು ಅತ್ಯಂತ ಕನಿಷ್ಠ ವೇತನ ಪಡೆದು ಬಹಳ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅವರ ಬಗ್ಗೆ ಸಮುದಾಯ ವಹಿಸಬೇಕಾಗಿದ್ದ ಕಾಳಜಿಯೂ ಅಷ್ಟಕಷ್ಟೇ. ಹೀಗಾಗಕೂಡದು. ಕೊರೋನಾದಿಂದ ನಿತ್ಯಜೀವನದ ಆವಶ್ಯಕತೆಗಳಿಗೂ ಕಷ್ಟಪಡುತ್ತಿರುವವರಲ್ಲಿ ಮಸೀದಿ- ಮದ್ರಸಗಳ ಸಿಬ್ಬಂಧಿಗಳೂ ಸೇರಿದ್ದು ಅವರನ್ನು ರಕ್ಷಿಸಿ ಬೆಳೆಸಬೇಕಾದದ್ದು ಸಮುದಾಯದ ಹೊಣೆಯಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೊಹಲ್ಲಾದ ಮಸೀದಿ- ಮದ್ರಸ ದ ಸಿಬ್ಬಂಧಿಗಳ ವೇತನ ಕಡಿತಗೊಳಿಸುವುದೋ, ಅವರನ್ನು ಸೇವೆಯಿಂದ ಮುಕ್ತಗೊಳಿಸುವುದೋ ಮಾಡಬಾರದೆಂದು ಜಿ.ಯಾಕೂಬ್ ವಿನಂತಿಸಿದ್ದಾರೆ.
ನಮ್ಮ ಉಲಮಾಗಳು ನಮ್ಮ ಸಮುದಾಯದ ಗೌರವವಾಗಿದ್ದು ಅವರ ಏಳಿಗೆಗಾಗಿ ನಮ್ಮ ಎಲ್ಲಾ ಮೊಹಲ್ಲಾಗಳ ಆಡಳಿತ ಸಮಿತಿ ಶ್ರಮಿಸಬೇಕೆಂದು ಜಿ.ಯಾಕೂಬ್ ಯೂಸುಫ್ ಕೋರಿದ್ದಾರೆ.