janadhvani

Kannada Online News Paper

ಜಗತ್ತಿಗೆ ಇನ್ನೊಬ್ಬ ಹಿಟ್ಲರ್ ಬೇಕಾಗಿಲ್ಲ- ಭಾರತದ ಇಸ್ಲಾಮೋಫೋಬಿಯಾ ವಿರುದ್ಧ ಅರಬ್ ಬರಹಗಾರ್ತಿ

“ನಾನು ಪ್ರತಿಬಾರಿ ನನ್ನ ಪರಿಚಯ ಹೇಳಿದಾಗ ಜನರು ನಗುತ್ತಿದ್ದುದು ನನಗೆ ನೆನಪಿದೆ. ಅಲ್ಲಿ ಪ್ರತಿಯೊಬ್ಬರಿಗೂ ಹಿಂದ್ ಹೆಸರಿನ ಅರಬ್ ಮಹಿಳೆಯನ್ನು ಭೇಟಿಯಾಗುವಾಗ ಒಂದು ರೀತಿಯ ಖುಷಿಯಾಗುತ್ತಿತ್ತು. “ಅಂದರೆ ಜೈ ಹಿಂದ್ ಎಂದೇ ?” ಎಂದು ಅವರು ನನ್ನನ್ನು ಕೇಳುತ್ತಿದ್ದರು, ನಾನು ಹೌದು ಎಂದು ನಗುತ್ತಿದ್ದೆ”

ನಮಗಿಂತ ಬೇರೆ ಧರ್ಮ, ಜನಾಂಗ, ಪ್ರಾದೇಶಿಕತೆಗಳ ಜನರೊಂದಿಗೆ ಹೀಗೆ ಬೆರೆತು ಬಾಳುವ ಕನಸೊಂದು ಅಲ್ಲಿ ಸಾಕ್ಷಾತ್ಕಾರವಾಗಿತ್ತು. ಅಲ್ಲಿ ನಾನು ಅಷ್ಟು ಸಂತುಷ್ಟಳಾಗಿದ್ದೆ. ಒಂದು ನಿರಾಳತೆಯ ಭಾವ ನನ್ನಲ್ಲಿ ಬಂದಿತ್ತು. ಯಾವುದೇ ಭೇದ ಅಥವಾ ದ್ವೇಷವಿಲ್ಲದ ಅಂತಹ ಒಂದು ದಿನ ಕಳೆಯಲು ನಾನು ಪ್ರತಿಯೊಬ್ಬರಿಗೂ ಶಿಫಾರಸು ಮಾಡುತ್ತೇನೆ. ನಿಮ್ಮ ಮನಸ್ಸು ತೆರೆದುಬಿಟ್ಟಾಗ ಅಲ್ಲಿ ದ್ವೇಷಕ್ಕೆ ಸ್ಥಳವಿರುವುದಿಲ್ಲ. ಸಿಟ್ಟು ಬಂದರೂ ಅಲ್ಲಿ ಅದು ಉಳಿಯುವುದಿಲ್ಲ. ಮರೆತುಬಿಡುವುದು, ಕ್ಷಮಿಸಿ ಬಿಡುವುದೇ ಜೀವನ ನಡೆಸುವ ಅತ್ಯುತ್ತಮ ಕಲೆ” ಎಂದು ತನ್ನ ಬೆಂಗಳೂರಿನ ಜೀವನದ ಅನುಭವವನ್ನು ವಿವರಿಸುತ್ತಾ, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮೊಫೋಬಿಯಾ ವಿರುದ್ಧ ಅರಬ್ ಬರಹಗಾರ್ತಿ, ಯುಎಇ ರಾಜ ಮನೆತನದ ಶೈಖ ಹಿಂದ್ ಅಲ್ ಖಾಸಿಮಿ ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ವಿಶೇಷ ಲೇಖನವನ್ನು ಬರೆದಿದ್ದಾರೆ.

ಭಾರತದ ಈ ಸ್ವರೂಪವನ್ನೇ ನೋಡಿದ್ದ ನಮ್ಮಂತವರಿಗೆ ಅಲ್ಲಿನ ಈಗಿನ ಸ್ಥಿತಿ ನೋಡುವಾಗ ಆಘಾತವಾಗುತ್ತದೆ. ದ್ವೇಷ, ಇಸ್ಲಾಂ ವಿರುದ್ಧದ ಹಗೆತನ, ನಿಯಮಿತವಾಗಿ ನಡೆಯುತ್ತಿರುವ ಹಿಂಸಾಚಾರ ಹಾಗು ಈಗ ಕೊರೊನ ನಡುವೆಯೇ ಸೃಷ್ಟಿಸಲಾಗಿರುವ ಹೊಸ ಸಾಂಕ್ರಾಮಿಕ ‘ಕುರಾನೋ ವೈರಸ್’. ನಾವು ಅವತ್ತು ಆ ಸಭಾಂಗಣದಲ್ಲಿ ಕಂಡಿದ್ದ ಶಾಂತಿಯ ಸುವಾಸನೆಯನ್ನು ನಾವು ಅಲ್ಲಿಂದ ವಾಪಸ್ ತಂದು ಬಿಟ್ಟೆವು ಎಂದು ನನಗೆ ಅನಿಸುತ್ತಿದೆ.

ಜಗತ್ತಿಗೆ ಇವತ್ತು ಇನ್ನೊಬ್ಬ ಹಿಟ್ಲರ್ ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ಇನ್ನೊಬ್ಬ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅಥವಾ ಗಾಂಧಿ. ನಿಮ್ಮ ಸೋದರರನ್ನು ಕೊಲ್ಲುವುದು ನಿಮ್ಮನ್ನು ಹೀರೊ ಮಾಡುವುದಿಲ್ಲ. ಅದು ನಿಮ್ಮನ್ನು ಸರ್ವಾಧಿಕಾರಿ ಮತ್ತು ಕೊಲೆಗಡುಕನಾಗಿ ಮಾಡುತ್ತದೆ. ಈಗ ಒಂದು ಆಂದೋಲನ ಪ್ರಾರಂಭವಾಗಿದೆ. ಅದರ ಪ್ರತಿಧ್ವನಿ ಇಡೀ ಅರಬ್ ಜಗತ್ತಿನಲ್ಲಿ ಕೇಳಿಸಿದೆ. ಜನರು ಇದನ್ನು ಗುರುತಿಸಿದ್ದಾರೆ ಮತ್ತು ರಮಝಾನ್ ನಲ್ಲಿ ಪ್ರತಿಯೊಬ್ಬ ಮುಸ್ಲಿಂ ಮನಸ್ಸು ಕೂಡ ಈ ದ್ವೇಷದ ಕಿಡಿಗಳು ಒಂದು ದೇಶವನ್ನು ನಾಶ ಮಾಡದಂತೆ ಪ್ರಾರ್ಥಿಸುತ್ತವೆ. ಈ ದ್ವೇಷ ಇಲ್ಲಿಗೇ ನಿಲ್ಲಬೇಕು. ಅದು ಯಾರಿಗೂ ಬೇಡ.

ಯುಎಇಯಲ್ಲಿ ದ್ವೇಷ ಹರಡುವುದು ಕಾನೂನುಬಾಹಿರ. ಜನರಿಗೆ ಇಂತಹದೊಂದು ಕಾನೂನು ಇರುವುದು ತಮಾಷೆಯಾಗಿ ಕಾಣಬಹುದು. ಆದರೆ ಸಂಕಷ್ಟದ ಸಂದರ್ಭಗಳಲ್ಲಿ ಆ ಕಾನೂನು ಈ ನೆಲದಲ್ಲಿ ಶಾಂತಿಯನ್ನು ಕಾಪಾಡುತ್ತದೆ. ಒಂದು ದೇಶವನ್ನು ನಿರ್ಮಾಣ ಮಾಡುವ ಅವಕಾಶ ಇರುವಾಗ ಅದರ ವಿನಾಶದಂಚಿಗೆ ತೆಗೆದುಕೊಂಡು ಹೋಗುವುದು ಏಕೆ ?, ಈ ಕಾನೂನು ದೇಶದಲ್ಲಿ ಉಳಿಸುವ ಶಾಂತಿ ಹಾಗು ತರುವ ಸಮೃದ್ಧಿಯನ್ನು ನೋಡಿದ ಯಾವುದೇ ನಾಯಕ ಇದನ್ನು ತನ್ನ ದೇಶದಲ್ಲೂ ಜಾರಿಗೆ ತರಬಹುದು ಎಂಬ ಆಶಾವಾದ ನನಗಿದೆ.

ಹೆಚ್ಚಿನವರು ಅರ್ಥಮಾಡಿಕೊಳ್ಳಲಾಗದ ಒಂದು ಬೇರ್ಪಡಿಸಲಾಗದ ಬಂಧ ಅರಬರು ಹಾಗು ಭಾರತೀಯರ ನಡುವೆ ಇದೆ. ನಾವು ಬೆಳೆಯುವಾಗ ನಮ್ಮ ಸುತ್ತಮುತ್ತಲು ಅರಬರಿಗಿಂತ ಹೆಚ್ಚು ಭಾರತೀಯರೇ ಇದ್ದರು. ಹಾಗಾಗಿ ಭಾರತೀಯರ ಬಗ್ಗೆ ನಮ್ಮ ವಂಶವಾಹಿಯಲ್ಲೇ ಒಂದು ಅನುಬಂಧ ಬೆಳೆದು ಬಂದಿದೆ. ನಮ್ಮ ಪ್ರತಿದಿನದ ಬಳಕೆಯ ಭಾಷೆಯ ಮೇಲೂ ಭಾರತೀಯರ ಪ್ರಭಾವ ಬಹಳ ದೊಡ್ಡದು.

ಈ ಯಶಸ್ವಿ, ಪ್ರಭಾವಿಗಳು ಎನ್ನಲಾದ ಮಿಲಿಯನೇರ್ ಗಳಿಗೆ ದ್ವೇಷ ಭಾಷಣ ನರಮೇಧದ ಪೀಠಿಕೆ ಎಂದು ಗೊತ್ತಿಲ್ಲವೇ? ,ನಾಝಿ ತತ್ವ ಒಂದೇ ದಿನದಲ್ಲಿ ಹುಟ್ಟಲಿಲ್ಲ. ಅದನ್ನು ಒಂದು ಕಲೆಯಂತೆ ಬೆಳೆಯಲು ಬಿಡಲಾಯಿತು. ಜನರು ಅದನ್ನು ನಿರ್ಲಕ್ಷಿಸಿದರು. ಮತ್ತು ಅದು ಅದೇ ಮೌನವೆಂಬ ದೌರ್ಬಲ್ಯವನ್ನು ಬಳಸಿಕೊಂಡು ಬೆಳೆಯಿತು. 18.2 ಕೋಟಿ ಮುಸ್ಲಿಮರಿರುವ ಭಾರತದಲ್ಲಿ ಅವರ ವಿರುದ್ಧ ಬಹಿರಂಗವಾಗಿಯೇ ದ್ವೇಷ ಹರಡಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಹಾಗು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ರಾಜೇಶ್ವರ್ ಸಿಂಗ್ “ಮುಸ್ಲಿಮರು ಹಾಗು ಕ್ರೈಸ್ತರನ್ನು ಡಿಸೆಂಬರ್ 31, 2021ರೊಳಗೆ ಭಾರತದಿಂದ ನಿರ್ಮೂಲನೆ ಮಾಡಲಾಗುವುದು” ಎಂದು ದ್ವೇಷ ಭಾಷಣ ಮಾಡುತ್ತಾರೆ.

ಒಂದು ಬಡ ಕೃಷಿಕ, ವಸಾಹತುಶಾಹಿಯ ಭಾಗವಾಗಿದ್ದ ಭಾರತ ಇಂದು ಸೂಪರ್ ಪವರ್ ಆಗಿರುವ ದೇಶ ಅದು. ಸಿಂಗಾಪುರ್, ದಕ್ಷಿಣ ಕೊರಿಯಾ, ಜರ್ಮನಿ ಹಾಗು ಜಪಾನ್ ಗಳೂ ಆ ಪಟ್ಟಿಯಲ್ಲಿವೆ. ನನ್ನ ಪ್ರೀತಿಯ ಮಾತ್ರದೇಶ ಯುಎಇ ಕೂಡ ಅದರಲ್ಲಿ ಸೇರಿದೆ. ಒಂದು ಕಾಲದಲ್ಲಿ ಸಣ್ಣಪುಟ್ಟ ಹಳ್ಳಿಗಳ ಈ ದೇಶ ತನಗೆ ಸಿಕ್ಕಿದ ತೈಲ ಸಂಪತ್ತನ್ನು ಶಿಕ್ಷಣಕ್ಕೆ ಹಾಗು ಹೊಸ ದೇಶ ನಿರ್ಮಾಣಕ್ಕೆ ಬಳಸಿತು. ಅದರಿಂದಾಗಿ ಇವತ್ತೊಂದು ಸಮೃದ್ಧ, ಸಂತೃಪ್ತಿಯ ದೇಶ ಬೆಳೆದು ನಿಂತಿದೆ. ಅದರಲ್ಲಿ 33 ಲಕ್ಷ ಭಾರತೀಯರಿಗೆ ಅದು ಆಶ್ರಯ ನೀಡಿದೆ. ಅವರು ಪ್ರತಿವರ್ಷ ತಮ್ಮ ದೇಶಕ್ಕೆ 17 ಬಿಲಿಯನ್ ಡಾಲರ್ ( ಸುಮಾರು 1.3 ಲಕ್ಷ ಕೋಟಿ ರೂಪಾಯಿ) ಹಣ ಕಳಿಸುತ್ತಿದ್ದಾರೆ.

ಈ ಎಲ್ಲ ದೇಶಗಳು ಸೂಕ್ತ ಮಾರ್ಗದರ್ಶನವಿಲ್ಲದೆ ಬೆಳೆಯಲಿಲ್ಲ. ಪ್ರತಿ ದೇಶಕ್ಕೂ ಒಬ್ಬೊಬ್ಬ ದೂರದೃಷ್ಟಿಯ ನಾಯಕನಿದ್ದರು. ಅವರು ಬಿತ್ತಿದ ಬೀಜದ ಫಲವನ್ನು ಎರಡು ಪೀಳಿಗೆಯ ಬಳಿಕ ನಾವು ಉಣ್ಣುತ್ತಿದ್ದೇವೆ. ಈ ಪೈಕಿ ಉನ್ನತ ಮಟ್ಟದ ಧಾರ್ಮಿಕ ಸಹಿಷ್ಣುತೆ ಈ ಭಾರೀ ಅಭಿವೃದ್ಧಿಗೆ ಕಾರಣವಾಯಿತು ಎಂಬ ಅಭಿಪ್ರಾಯವಿದೆ. ಇವತ್ತು ಶಿಕ್ಷಣ, ಅರೋಗ್ಯ, ಸಾಮಾಜಿಕ ಸ್ಥಿರತೆ, ಸುರಕ್ಷತೆ, ರಕ್ಷಣೆ, ಅವಕಾಶ , ಆರ್ಥಿಕತೆ ಹಾಗು ಉದ್ಯಮಶೀಲತೆ ಯಾವುದೇ ದೇಶದ ಯಶಸ್ಸಿನ ಸೂತ್ರದ ಅವಿಭಾಜ್ಯ ಅಂಗಗಳಾಗಿವೆ.

ಗಾಂಧೀಜಿಯ ಮ್ಯೂಸಿಯಂ ಗೆ ಭೇಟಿ ನೀಡಿದಾಗ ಅವರು ಯುದ್ಧ ನಿಲ್ಲಿಸುವಂತೆ ಹಿಟ್ಲರ್ ಗೆ ಬರೆದ ಪತ್ರವೊಂದನ್ನು ಓದಿದೆ. ಆಗ ಅವರ ಆತ್ಮಕತೆಯನ್ನು ನಾನು ಖರೀದಿಸಿದೆ. ಗಾಂಧೀಜಿ ಭಾರತದಲ್ಲಿ ಶಿಕ್ಷಣ ಮತ್ತು ಶೌಚಾಲಯಗಳ ಮಹತ್ವವನ್ನು ಒತ್ತಿ ಹೇಳಿದರು. ಅವು ಅಲ್ಲಿನ ಮಹಿಳೆಯರ ಅರೋಗ್ಯ ಮತ್ತು ಸುರಕ್ಷತೆಗೆ ನೇರವಾಗಿ ಸಂಬಂಧಿಸಿದವುಗಳು. ಹಾಗೆಯೇ ಆಮದಿತ ವಸ್ತುಗಳ ಬದಲಿಗೆ ಭಾರತೀಯ ಹತ್ತಿ ಮತ್ತು ಜವಳಿಯನ್ನೇ ಬಳಸುವಂತೆ ಅವರು ಕರೆ ನೀಡಿದರು. ಅದು ಉದ್ಯಮಶೀಲತೆಯನ್ನು ಬೆಳೆಸಿತು ಮತ್ತು ಆರ್ಥಿಕತೆಗೆ ಬಲ ತುಂಬಿತು. ಆ ದೂರದೃಷ್ಟಿಗೆ ಸಲಾಂ.

ಅದರ ಬಳಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ಇರುವುದು ಆಡಳಿತದ ಗುಣಮಟ್ಟಕ್ಕೆ. ರೋಮ್ ಒಂದೇ ದಿನದಲ್ಲಿ ಎದ್ದು ನಿಲ್ಲಲಿಲ್ಲ. ಹಾಗೆಯೇ ಗಾಂಧೀಜಿಯ ದೂರದೃಷ್ಟಿಯ ಫಲ ಒಂದು ಪೀಳಿಗೆಯ ನಂತರವೇ ನೋಡಲು ಸಿಕ್ಕಿತು. ನೆಲ್ಸನ್ ಮಂಡೇಲಾ ಕೂಡ ಶಾಂತಿ ಕಾಪಾಡುವಲ್ಲಿ ಗಾಂಧೀಜಿ ಅವರಿಂದಲೇ ಪ್ರೇರಿತರಾಗಿದ್ದರು ಎಂಬುದನ್ನು ನಾವು ಮರೆಯದಿರೋಣ. ಗಾಂಧೀಜಿ ಭಾರತಕ್ಕೆ ಗುಲಾಮಗಿರಿಯಿಂದ ಮೋಕ್ಷ ಕೊಟ್ಟರು ಎಂಬುದನ್ನು ಯಾರೂ ನಿರಾಕರಿಸಲಾಗದು. ನಾನು ಭಾರತದ ಬಗ್ಗೆ ಇಷ್ಟೊಂದು ಪ್ರೀತಿಯಿಂದ ಮಾತಾಡಿದ್ದಕ್ಕೆ ಕ್ಷಮೆಯಿರಲಿ. ಅದು ಹಾಲು ಮತ್ತು ಜೇನಿನ ಭೂಮಿ. ನಮ್ಮ ಸಂಸ್ಕೃತಿಯಲ್ಲಿ ನೀವು ಭಾರತದ ಹಾಲು ಕುಡಿದಿದ್ದರೆ ಭಾರತ ನಿಮ್ಮ ತಾಯಿಯಾಗುತ್ತದೆ.

‘ವಸುದೈವ ಕುಟುಂಬಕಂ’ ಅಂದರೆ ಜಗತ್ತೇ ಒಂದು ಕುಟುಂಬ ಎಂಬುದು ಭಾರತೀಯ ಸಮಾಜದ ಅತ್ಯಂತ ಮಹತ್ವದ ಮೌಲ್ಯ. ಮಹಾ ಉಪನಿಷತ್ತಿನ ಈ ವಾಕ್ಯವನ್ನು ಭಾರತದ ಸಂಸತ್ತಿನ ಪ್ರವೇಶ ಸಭಾಂಗಣದಲ್ಲೇ ಕೆತ್ತಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದನ್ನು ನೆನಪಿಸಿದ್ದಾರೆ, ಗಾಂಧೀಜಿ ಅದನ್ನು ಜಾರಿಗೆ ತಂದಿದ್ದಾರೆ. ನಾನು ಭಾರತದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಮರಣದ ನೆರಳು ಇನ್ನಷ್ಟು ಚಾಚುತ್ತಾ ಹೋಗದಂತೆ ತಡೆಯಲು ಮತ್ತು ನಮ್ಮ ಆರ್ಥಿಕತೆ ಹಾಗು ಸಮಾಜ ಸಂಪೂರ್ಣ ಕುಂಠಿತವಾಗದಂತೆ ತಡೆಯಲು ಜನರು ಮನೆಯೊಳಗೇ ಇರಬೇಕಾದ ಸಾಂಕ್ರಾಮಿಕದ ಈ ವಿಶೇಷ ಸಂದರ್ಭದಲ್ಲಿ ಇದಕ್ಕಾಗಿ ಹೆಚ್ಚು ಪ್ರಾರ್ಥಿಸುತ್ತೇನೆ.

error: Content is protected !! Not allowed copy content from janadhvani.com