janadhvani

Kannada Online News Paper

ಧಾರ್ಮಿಕ ದ್ವೇಷ ಹರಡುವ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲು

ನವದೆಹಲಿ: ಪಾಲ್ಘರ್ ಘಟನೆ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಆರೋಪ ಮಾಡಿದ್ದ ಕಾರಣಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಛತ್ತೀಸಗಢದ ರಾಯ್‌ಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪಾಲ್ಘರ್ ನಲ್ಲಿ ಸಾಧುಗಳನ್ನು ಗ್ರಾಮಸ್ಥರೇ ಥಳಿಸಿ ಹತ್ಯೆ ಮಾಡಿದ್ದು ಈ ಪ್ರಕರಣ ಸಂಬಂಧ ಸೋನಿಯಾ ಗಾಂಧಿ ವಿರುದ್ಧ ಅರ್ನಾಬ್ ಗೋಸ್ವಾಮಿ ಆರೋಪ ಹೊರೆಸಿದ ಬೆನ್ನಲ್ಲೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಗೋಸ್ವಾಮಿ ವಿರುದ್ಧ ಅನೇಕ ದೂರುಗಳನ್ನು ದಾಖಲಿಸಿದ ನಂತರ ಛತ್ತೀಸಗಢದ ರಾಯ್‌ಪುರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ.


ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮೋಹನ್ ಮಾರ್ಕಮ್ ಅವರು ನೀಡಿದ ದೂರಿನ ಮೇರೆಗೆ ಸಿವಿಲ್ ಲೈನ್ಸ್ ಪೊಲೀಸರು ಅರ್ನಾಬ್‌ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

“ತನ್ನ ಟಿವಿ ಕಾರ್ಯಕ್ರಮದಲ್ಲಿ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅಪರಾಧವನ್ನು ಪ್ರಚೋದಿಸಿದ್ದಾರೆ ಮತ್ತು ಕೋಮು ಸೌಹಾರ್ದತೆಯನ್ನು ಭಂಗಗೊಳಿಸಲು ಪ್ರಯತ್ನಿಸಿದ್ದಾರೆ,” ಎಂದು ಕಾಂಗ್ರೆಸ್‌ ನಾಯಕ ಮೋಹನ್ ಮಾರ್ಕಮ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಕಾಂಗ್ರೆಸ್ ಮಾತುಕತೆ ನಡೆಸಿದೆ ಎಂದು ಮಹಾರಾಷ್ಟ್ರ ಸಚಿವ ಬಾಲಸಹಾಬ್ ಥೋರತ್ ಹೇಳಿದ್ದಾರೆ. “ಪಾಲ್ಘರ್‌ನಲ್ಲಿ ನಡೆದಿದ್ದ ದುರದೃಷ್ಟಕರ ಘಟನೆಯನ್ನು ಕೋಮುವಾದದ ಬಣ್ಣ ಹಚ್ಚಲು ಅರ್ನಾಬ್ ಗೋಸ್ವಾಮಿ ಮಾಡಿದ ಪ್ರಯತ್ನಗಳನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜೀ ವಿರುದ್ಧ ಅವರು ಬಳಸಿದ ಅವಹೇಳನಕಾರಿ ಭಾಷೆ ಅತ್ಯಂತ ಕೀಳುಮಟ್ಟದ್ದಾಗಿದೆ,” ಎಂದು ಬಾಲಸಹಾಬ್ ಥೋರತ್ ಟ್ವೀಟ್‌ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಅರ್ನಾಬ್‌ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ.

error: Content is protected !! Not allowed copy content from janadhvani.com