janadhvani

Kannada Online News Paper

ಸೌದಿ: ವಾಹನ ಸಂಚಾರಕ್ಕೆ ಕಠಿಣ ನಿಯಂತ್ರಣ- ಏಕೀಕೃತ ಪಾಸ್ ಜಾರಿ

ರಿಯಾದ್: ಕೋವಿಡ್ ಪ್ರತಿರೋಧದ ಭಾಗವಾಗಿ ಸೌದಿಯಲ್ಲಿ ವಾಹನ ಸಂಚಾರಕ್ಕೆ ಕಠಿಣ ನಿಯಂತ್ರಣ ಜಾರಿಗೆ ತರಲಾಗಿದೆ. ಗೃಹ ಸಚಿವಾಲಯ ಹೊಸ ಆದೇಶ ಹೊರಡಿಸಿದ್ದು, ಏಕೀಕೃತ ಪಾಸ್ ವ್ಯವಸ್ಥೆ ಇಂದಿನಿಂದ ರಿಯಾದ್‌ನಲ್ಲಿ ಜಾರಿಯಾಗಿದೆ.

ಸಾರ್ವಜನಿಕ ವಲಯದಲ್ಲಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಈ ಸಮಯದಲ್ಲಿ ಹೊರಗಡೆ ಬರಲು ನೀಡಲಾಗುವ ಪಾಸ್‌ಗೆ ಇಲಾಖಾ ಮುಖ್ಯಸ್ಥರು ಮತ್ತು ಗೃಹ ಸಚಿವಾಲಯದ ಸಮಿತಿ ಸಹಿ ಹಾಕಿರಬೇಕು. ದೊಡ್ಡ ವ್ಯಾನ್ ಮತ್ತು ನೌಕರರನ್ನು ಕರೆದೊಯ್ಯುವ ಬಸ್‌ಗಳ ಚಾಲಕರು ಮಾತ್ರ ಪಾಸ್ ಹೊಂದಿರಬೇಕು, ಬಸ್ ಅಥವಾ ವ್ಯಾನ್‌ನಲ್ಲಿರುವ ಎಲ್ಲರಿಗೂ ಇದು ಅಗತ್ಯವಿಲ್ಲ. ಆದರೆ, ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೂ ಪಾಸ್ ಹೊಂದಿರಬೇಕು.

ಸಚಿವಾಲಯ ಹೊರಡಿಸಿರುವ ಸುರಕ್ಷತಾ ನಿರ್ದೇಶನಗಳಿಗೆ ಅನುಗುಣವಾಗಿ ಅರ್ಧದಷ್ಟು ಜನರನ್ನು ಮಾತ್ರ ಹತ್ತಿಸ ಬಹುದು. ಉಲ್ಲಂಘನೆಗೆ ಮೊದಲ ಬಾರಿ ಹತ್ತು ಸಾವಿರ ರಿಯಾಲ್ ದಂಡ ಹಾಕಲಾಗುವುದು. ಎರಡನೇ ಹಂತದಲ್ಲಿ, 20,000 ದಂಡ ಮತ್ತು ಮೂರನೇ ಬಾರಿಯೂ ಉಲ್ಲಂಘನೆ ಕಂಡುಬಂದರೆ ದಂಡ ಸಹಿತ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.

ಕೆಲಸದ ದಾಖಲೆಗಳನ್ನು ಹೊಂದಿರುವವರು, ಬೆಳಿಗ್ಗೆ ಆರಿಂದ ಮೂರರ ನಡುವೆ ಹೊರಗೆ ಹೋಗಬಹುದು. ಅಗತ್ಯ ಉದ್ದೇಶಗಳಿಗಾಗಿ ಹೊರಗಡೆ ಬಂದು ತಿರುಗಾಡುವುದು ಕಂಡುಬಂದರೂ ದಂಡ ಕಟ್ಟಬೇಕಾದೀತು. ಅಗತ್ಯ ವಸ್ತುಗಳನ್ನು ಖರೀದಿಸಿ ಬೇಗನೆ ಮನೆ ಸೇರಬೇಕು.ಅನಗತ್ಯವಾಗಿ ಹೊರಗೆಬಂದ ಅನೇಕರಿಗೆ ಇಂದು ದಂಡ ವಿಧಿಸಲಾಯಿತು.

ಆಂತರಿಕ ಸಚಿವಾಲಯವು ವಲಸಿಗರು ಸೇರಿದಂತೆ ಹಲವಾರು ಜನರ ಇಖಾಮಾದ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದು, ನಂತರ ಅವರಿಗೆ ದಂಡ ವಿಧಿಸಲಾಗುತ್ತದೆ. ಸಾಕಷ್ಟು ದಾಖಲೆಗಳೊಂದಿಗೆ ಹೊರಗಡೆ ಬಂದಿದ್ದರೆ, ಅಬ್ಶೀರ್ ಮೂಲಕ ದಂಡದ ವಿರುದ್ದ ಸ್ವತಃ ಅಪೀಲ್ ಮಾಡಬಹುದು. ಬೆಳಿಗ್ಗೆ, ಎಲ್ಲರೂ ಅಗತ್ಯ ವಸ್ತುಗಳನ್ನು ಖರೀದಿಸಿ ಆದಷ್ಟು ಬೇಗ ಮನೆ ಸೇರುತ್ತಿದ್ದಾರೆ. ಇದ್ದಕ್ಕಿದ್ದಂತೆ, ಭದ್ರತಾ ಪಡೆಗಳು ಅನೇಕ ಸ್ಥಳಗಳಿಗೆ ಆಗಮಿಸುತ್ತಿದ್ದು, ಹೊರಗಡೆ ನಿಂತಿದ್ದವರು ಬಲೆಗೆ ಬಿದ್ದಿದ್ದಾರೆ.

ಮದೀನಾದಲ್ಲಿ ಜನರು ಮುಂಜಾನೆ ಹೊರಬಂದು ವಸ್ತುಗಳನ್ನು ಖರೀದಿಸಿ ಮರಳುತ್ತಾರೆ. ಕೆಲವರು ಹಿಂದೆಯೇ ಆಹಾರವನ್ನು ಖರೀದಿಸಿದ್ದು, ಅಂತವರು ಮನೆ ಬಿಟ್ಟು ಕದಲುವುದಿಲ್ಲ. ಸಾಧ್ಯವಾದಷ್ಟು ಒಳಗೆ ಇರಬೇಕೆಂದು ಸಚಿವಾಲಯ ಸೂಚಿಸಿದೆ. ಅನಾರೋಗ್ಯ ಪೀಡಿತರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದ್ದು, ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

error: Content is protected !! Not allowed copy content from janadhvani.com