ದುಬೈ: ಯುಎಇಯ ಖಾಸಗಿ ವಲಯದಲ್ಲಿ ಕೆಲಸಮಾಡುವ ವಿದೇಶಿ ಪ್ರಜೆಗಳಿಗೆ ತಮ್ಮ ವಾರ್ಷಿಕ ರಜೆರನ್ನು ಮುಂಚಿತವಾಗಿ ಪಡೆದು ಕೊಳ್ಳಲು ಅವಕಾಶವಿದೆ. ರೆಸಿಡೆನ್ಸಿಯಲ್ ವಿಸಾವನ್ನು ನವೀಕರಿಸಲು ವಿಳಂಬವಾಗುವರಿಗೆ ಈ ವರ್ಷದ ಅಂತ್ಯದವರೆಗೆ ದಂಡ ವಿಧಿಸಬೇಕಾಗಿಲ್ಲ ಎಂಬುದಾಗಿ ನಿರ್ಧರಿಸಲಾಗಿದೆ.
ಮಾನವ ಸಂಪನ್ಮೂಲ ಸಚಿವಾಲಯ, ವಲಸೆ ಇಲಾಖೆ, ವಿದೇಶಾಂಗ ವ್ಯವಹಾರ ಮತ್ತು ಅಂತರ್‌ರಾಷ್ಟ್ರೀಯ ಸಹಕಾರ ಸಚಿವಾಲಯ, ನಾಗರಿಕ ವಿಮಾನಯಾನ ಪ್ರಾಧಿಕಾರ ಮತ್ತು ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಂಟಿಯಾಗಿ ರಜಾದಿನಗಳಿಗೆ ಸಂಬಂಧಿಸಿದ ಹೊಸ ಯೋಜನೆಯನ್ನು ರೂಪಿಸಿವೆ. ಈ ಯೋಜನೆಗೆ ‘ಎರ್ಲಿ ಲೀವ್’ ಎಂಬ ಹೆಸರನ್ನು ನೀಡಲಾಗಿದೆ.
ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ದೇಶಗಳಿಗೆ ಮರಳಲು ಬಯಸುವವರಿಗೆ ಈ ಯೋಜನೆ ರೂಪಿಸಲಾಗಿದೆ. ಉದ್ಯೋಗದಾತನಿಗೆ ವಾರ್ಷಿಕ ರಜೆಯ ಸಮಯವನ್ನು ತಿಳಿಸುವ ಅರ್ಜಿಯನ್ನು ಸಲ್ಲಿಸಬೇಕು.
ಆತ ಅನುಮತಿಸಿದರೆ ಉದ್ಯೋಗಿಗಳು ತಮ್ಮ ವಾರ್ಷಿಕ ರಜೆಯನ್ನು ಈ ಮೂಲಕ ಬದಲಾಯಿಸ ಬಹುದು, ಅಥವಾ ಉದ್ಯೋಗದಾತರ ತಿಳುವಳಿಕೆಯೊಂದಿಗೆ ಸಂಬಳ ರಹಿತ ಹೆಚ್ಚುವರಿ ರಜೆಯನ್ನೂ ಪಡೆಯಬಹುದು. ಕಷ್ಟದ ಸಮಯದಲ್ಲಿ ಸಂಬಂಧಿಕರೊಂದಿಗೆ ಮನೆಯಲ್ಲಿರಬಯಸುವ ಜನರ ಅಭಿಲಾಷೆಗೆ ಅನುಗುಣವಾಗಿ ಈ ಯೋಜನೆ ಎಂದು ಸರಕಾರ ಹೇಳಿದೆ.
ಯುಎಇ ರವಿವಾರ ಸೇರಿದ ಕ್ಯಾಬಿನೆಟ್ ಸಭೆಯಲ್ಲಿ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈಗ ವಿದೇಶದಲ್ಲಿರುವ ಅನಿವಾಸಿಗಳು ಕೂಡ ಇದರ ಪ್ರಯೋಜನ ಪಡೆಯಬಹುದಾಗಿದೆ.
ಈ ಮೊದಲು, ದಂಡವಿಲ್ಲದೆ ನಿವಾಸ ವೀಸಾ ನವೀಕರಣಕ್ಕಾಗಿ ಮೂರು ತಿಂಗಳುಗಳನ್ನು ಅನುಮತಿಸಲಾಗಿತ್ತು.ಇದೀಗ ವರ್ಷದ ಕೊನೆಯ ವರೆಗೆ ದಂಡ ರಹಿತ ನವೀಕರಣಕ್ಕೆ ಅವಕಾಶ ನೀಡಲಾಗಿದೆ.
ಏತನ್ಮಧ್ಯೆ, ಅಗತ್ಯ ಸೇವೆಗಳಾಗಿ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಕೆಲಸ ಮಾಡುವವರು ದುಬೈಗೆ ಪ್ರಯಾಣಿಸುವ ಮೊದಲು ಪರವಾನಗಿ ಪಡೆಯಬೇಕು ಎಂದು ದುಬೈ ಸರಕಾರ ಎಚ್ಚರಿಸಿದೆ. ಅನುಮತಿಗಾಗಿ Dxbpermit.gov.ae ಎಂಬ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.