ನವದೆಹಲಿ ,ಮಾ.26: ವಿಶ್ವಾದ್ಯಂತ ಸಾವಿರಾರು ಜನರನ್ನು ಬಲಿಪಡೆದಿರುವ covid-19 ಅಬ್ಬರಕ್ಕೆ ಭಾರತವೂ ತುತ್ತಾಗಿದ್ದು, ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಕೋರೋನಾ ವೈರಸ್ನಿಂದಾಗಿ ಮತ್ತೆರಡುಮಂದಿ ಮೃತಪಟ್ಟಿದ್ದು, ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಕೊರೋನಾ ಸೋಂಕಿತರ ಸಂಖ್ಯೆ 649 ಆಗಿದೆ.
65 ವರ್ಷದ ಶ್ರೀನಗರದ ವೃದ್ಧೆಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ವೃದ್ಧೆ ಇಂದು ಮುಂಜಾನೆ ಅಸುನೀಗಿದ್ದಾರೆ. ಈ ಮೂಲಕ ಶ್ರೀನಗರದಲ್ಲಿ ಇದೇ ಮೊದಲ ಕೊರೋನಾ ಮರಣ ಸಂಭವಿಸಿದೆ. ಇನ್ನು, ನವಿ ಮುಂಬೈನ ವ್ಯಕ್ತಿ ಕೂಡ ಕೊರೋನಾ ವೈರಸ್ಗೆ ಬಲಿಯಾಗಿದ್ದಾನೆ.ಭಾರತದಲ್ಲಿ ಈಗಾಗಲೇ 649 ಜನರಿಗೆ ಕೊರೋನಾ ಸೋಂಕು ತಗುಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈವರೆಗೆ ವಿಶ್ವದಲ್ಲಿ ಒಟ್ಟು 21,363 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಯುರೋಪ್ ರಾಷ್ಟ್ರವೊಂದರಲ್ಲೇ 14 ಸಾವಿರಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಚೀನಾದಲ್ಲಿ ಸದ್ಯ, ಕೊರೋನಾ ವೈರಸ್ ಅಟ್ಟಹಾಸ ನಿಯಂತ್ರಣಕ್ಕೆ ಬಂದಿದೆ. ಈವರೆಗೆ ಚೀನಾದಲ್ಲಿ 3,281 ಜನರು ಬಲಿಯಾಗಿದ್ದಾರೆ.
ಇನ್ನು, ಇಟಲಿಯಲ್ಲಿ ಸದ್ಯದ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರು ಲಕ್ಷಣ ಗೋಚರವಾಗುತ್ತಿಲ್ಲ. ಈಗಾಗಲೇ ಇಟಲಿಯಲ್ಲಿ ಕೊರೋನಾ ವೈರಸ್ಗೆ 7,503 ಜನರು ಬಲಿಯಾಗಿದ್ದಾರೆ. ಒಟ್ಟು 74 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಸ್ಪೇನ್ ಚೀನಾವನ್ನು ಹಿಂದಿಕ್ಕಿದೆ. ಸ್ಪೇನ್ನಲ್ಲಿ ಈವರೆಗೆ 3,647 ಸಾವುಗಳು ಸಂಭವಿಸಿವೆ. ಇನ್ನು, ಕೊರೋನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿ ಸಮೀಪಿಸಿದೆ.