ಮಂಗಳೂರು: ಮಂಗಳೂರು ಬಾಂಬರ್ ಬಂಧನ ವಿಚಾರವಾಗಿ ಮಾಜಿ ಸಚಿವ ಯುಟಿ ಖಾದರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಇಂದು ಮಾದ್ಯಮದೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರ ವಿಚಾರ. ಸಮಾಜದ್ರೋಹಿ ಶಕ್ತಿಗಳು ಎಲ್ಲಾ ವರ್ಗದಲ್ಲಿ ಇದ್ದಾರೆ. ಒಂದೇ ವರ್ಗವನ್ನು ಗುರಿಯಾಗಿಸಬಾರದು. ಆರೋಪಿಯನ್ನು ಪತ್ತೆ ಹಚ್ಚುವ ಮೊದಲೇ ಒಂದು ಸಮುದಾಯವನ್ನು ಗುರಿಯಾಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೇಚೆಗೆ ಮಂಗಳೂರಿನ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಇಂದು ಡಿಜಿ ನೀಲಮಣಿ ರಾಜು ಮುಂದೆ ಶರಣಾಗಿದ್ದನು. ಈ ವಿಚಾರವಾಗಿ ಮಾತನಾಡಿ, ಆದಿತ್ಯ ರಾವ್ ಒಬ್ಬನೇ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಬೇರೆಯವರ ಸಹಾಯದಿಂದ ಈ ಕೆಲಸ ಮಾಡಿದ್ದಾನೆ ಎಂದು ಖಾದರ್ ಆರೋಪಿಸಿದರು.
ಅಂತೆಯೇ ಮಾತನಾಡಿ, ಆರೋಪಿಗೆ ತಲೆ ಸರಿಯಿಲ್ಲ ಅಂತಾ ಹೇಳ್ತಾರೆ, ಆರೋಪಿಗೆ ಬಾಂಬ್ ಫಿಕ್ಸ್ ಮಾಡೋಕೆ ತಲೆ ಸರಿಯಿದ್ಯಾ? ಆರೋಪಿ ಬೆಂಗಳೂರು ಮುಟ್ಟುವ ತನಕ ಪೊಲೀಸರು ಎಲ್ಲಿದ್ದರು. ಎಲ್ಲಾ ಸ್ಕ್ಯಾಡ್ ಗಳು ಎಲ್ಲಿ ಹೋಗಿತ್ತು. ಪೊಲೀಸರಿಗೆ ಸಿಸಿಟಿವಿ ವಿಡಿಯೋಗಳು ದೊರತಿತ್ತು. ಎಲ್ಲಾ ಮಾಹಿತಿಗಳೂ ಪೊಲೀಸರ ಬಳಿ ಇತ್ತು. ಆದರೂ ಆರಾಮಾವಾಗಿ ಬೆಂಗಳೂರಿಗೆ ಹೋಗಿದ್ದಾನೆ. ಆರಾಮವಾಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಇದರ ಹಿಂದೆ ದೊಡ್ಡ ಸಂಚು ಇದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಯುಟಿ ಖಾದರ್ ಆಗ್ರಹಿಸಿದರು.
ಅಲ್ಲದೇ, ಮಂಗಳೂರು ಬಾಂಬರ್ ಪತ್ತೆಯಾಗುವ ಮೊದಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದಾರೆ. ಅಲ್ಲದೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಬಾಂಬ್ ಪತ್ತೆಗೂ ಇಸ್ಲಾಂ ಕನೆಕ್ಟಿವಿಟಿ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ನಾಯಕರು ಜನರ ಮುಂದೆ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದರು.