ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ನಮ್ಮ ರಾಜ್ಯ ಪ್ರಯೋಗ ಶಾಲೆ ಅಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಗುಡುಗಿದ್ದಾರೆ.ಮಾಜಿ ಸಚಿವ ಯುಟಿ ಖಾದರ್ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಬಿಜೆಪಿ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಲು ನಿರ್ಧರಿಸಿರುವುದು ಸರಿಯಲ್ಲ. ಬಿಜೆಪಿಯ ಈ ಗುಪ್ತ ಅಜೆಂಡಾ ಹಿಂದೆ ಚುನಾವಣಾ ರಾಜಕೀಯವಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿ ಸಂಭವಿಸಿ ಅನೇಕ ಮಂದಿ ವಾಸ್ತವ್ಯದ ಮೂಲ ದಾಖಲೆಯನ್ನು ಕಳೆದುಕೊಂಡಿದ್ದಾರೆ. ಹಾಗಾದರೆ ಅವರು ದೇಶದ ಪ್ರಜೆಗಳು ಅಲ್ಲವೇ? ಇಂತಹ ಪರಿಸ್ಥಿತಿ ಇರುವಾಗ ನಿರ್ದಿಷ್ಟ ಮಾನದಂಡ ಇಲ್ಲದೆ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದು ಬೇಡ ಎಂದರು.
ಕರ್ನಾಟಕ ಸೇರಿದಂತೆ ಬಿಜೆಪಿ ರಾಜ್ಯಗಳಲ್ಲಿ ಮಾತ್ರ ಪೌರತ್ವ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಉಳಿದಂತೆ ಕೇರಳ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ತೆಲಂಗಾಣಗಳಲ್ಲಿ ಯಾಕೆ ಜಾರಿಗೆ ತರುತ್ತಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಅದನ್ನು ಮುಸ್ಲಿಮರು ನಡೆಸಿಲ್ಲ. ಅಸ್ಸಾಂನಲ್ಲಿ ಬಿಜೆಪಿಯ ಮಿತ್ರ ಪಕ್ಷಗಳೇ ವಿರೋಧಿಸಿವೆ ಎಂದು ಖಾದರ್ ತಿಳಿಸಿದರು.
ಕಾಯ್ದೆ ಬಗ್ಗೆ ಸಂದೇಹವಿರುವಾಗ ಅದನ್ನು ಸರಿಪಡಿಸುವುದು ಕೇಂದ್ರ ಮಾಡಬೇಕಾದ ಕೆಲಸ. ಅದು ಬಿಟ್ಟು ಕಡ್ಡಾಯ ಜಾರಿಗೆ ಹೊರಟರೆ ಅದರ ಅನುಷ್ಠಾನಕ್ಕೆ ಆಸ್ಪದ ನೀಡುವುದಿಲ್ಲ ಎಂದು ಯುಟಿ ಖಾದರ್ ಹೇಳಿದರು.