ಹೊಸದಿಲ್ಲಿ: ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಗೂ ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎಂದು ದಿಲ್ಲಿ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ.
ಅದೇ ಸಮಯ ಪ್ರತಿಭಟನೆಗಳಿಗೆ ಮೂಲ ಕಾರಣವಾಗಿರುವ ಹಾಗೂ ಸರಕಾರ ಮುಂದೆ ಜಾರಿಗೊಳಿಸಲಿರುವ ಎನ್ಆರ್ ಸಿ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ ‘ಇನ್ನೂ ಕಾನೂನು ಆಗಿಲ್ಲ’ ಎಂದು ಅವರು ತಿಳಿಸಿದರು.
“ಪ್ರತಿಭಟನೆ ನಡೆಸುವುದು ಭಾರತದ ಜನರ ಹಕ್ಕಾಗಿದೆ, ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ನಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಮುಖ್ಯ” ಎಂದು ಶಾಹಿ ಇಮಾಮ್ ಹೇಳಿದ್ದಾರೆ. ಪೌರತ್ವ ಕಾಯಿದೆ ಭಾರತದ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಂ ವಲಸಿಗರ ಮೇಲೆ ಪರಿಣಾಮ ಬೀರುವುದು ಎಂದು ಅವರು ತಿಳಿಸಿದರು.
“ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್ಆರ್ ಸಿ ನಡುವೆ ವ್ಯತ್ಯಾಸವಿದೆ. ಸಿಎಎ ಕಾಯ್ದೆಯಾಗಿದ್ದರೆ ಎನ್ಆರ್ ಸಿ ಕೇವಲ ಘೋಷಣೆಯಾಗಿದೆಯಷ್ಟೇ” ಎಂದು ಅವರು ಹೇಳಿದರು.ದಿಲ್ಲಿಯ ಜಾಮಿಯ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ರವಿವಾರ ಪ್ರತಿಭಟನೆಯ ವೇಳೆ ನಡೆದ ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಹಿ ಇಮಾಮ್ ಹೇಳಿಕೆ ಬಂದಿದೆ.
ದೆಹಲಿಯ ಸೀಲಾಂಪುರದಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, 12 ಪೊಲೀಸರು ಸೇರಿ 21 ಮಂದಿ ಗಾಯಗೊಂಡಿದ್ದಾರೆ. ದೇಶದಾದ್ಯಂತ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.