janadhvani

Kannada Online News Paper

ಮತ್ತೆ ‘ಮಹಾ’ ನಾಟಕ : ಸಿಎಂ ಆಗಿ ಫಡ್ನವಿಸ್,ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣವಚನ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೆಕ್ಷಣದಲ್ಲಿ ತೀವ್ರ ಅಚ್ಚರಿಯ ಬೆಳವಣಿಗೆ ನಡೆದಿದ್ದು ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಳೆದ ರಾತ್ರಿಯಿಂದೀಚೆಗೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ ಸಿಪಿಯ ಹಲವು ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇಂದು ಬೆಳಗ್ಗೆ ಜಭವನದಲ್ಲಿ ನಡೆದ ತರಾತುರಿ ಕಾರ್ಯಕ್ರಮದಲ್ಲಿ ಸಿಎಂ ಆಗಿ ಎರಡನೇ ಬಾರಿಗೆ ದೇವೇಂದ್ರ ಫಡ್ನವಿಸ್, ಡಿಸಿಎಂ ಆಗಿ ಅಜಿತ್ ಪವರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡ ಅಜಿತ್ ಪವರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಅಕ್ಟೋಬರ್ 24ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಿಎಂ ಹುದ್ದೆಗಾಗಿ ಶಿವಸೇನೆ ಕ್ಯಾತೆ ತೆಗೆದಿತ್ತು. ಎರಡೂವರೆ ವರ್ಷ ಸಿಎಂ ಹುದ್ದೆ ಬಿಟ್ಟುಕೊಟ್ಟರೆ ಮಾತ್ರ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಮುಂದೆ ಬರುತ್ತೇವೆ ಇಲ್ಲದಿದ್ದರೆ ಬಿಜೆಪಿ ಜೊತೆ ಸಖ್ಯವೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿ ಎನ್ ಸಿಪಿ, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಇಷ್ಟು ದಿನ ಕಸರತ್ತು ನಡೆಸಿತು.

ಈ ಮಧ್ಯೆ ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ, ಶಿವಸೇನೆ, ಎನ್ ಸಿಪಿ-ಕಾಂಗ್ರೆಸ್ ಪಕ್ಷಗಳಿಗೆ ಸಹ ಆಹ್ವಾನ ನೀಡಿದ್ದರು. ಅವರು ನಿಗದಿಪಡಿಸಿದ ದಿನಾಂಕದೊಳಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ ಎಂದು ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು.

ಆನಂತ ಬಿಜೆಪಿ ಸುಮ್ಮನಾಗಿದ್ದರೆ, ಶಿವಸೇನೆ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸಿತು. ಇಂದ್ರನ ಸಿಂಹಾಸನ ಕೊಟ್ಟರೂ ಇನ್ನು ಬಿಜೆಪಿ ಜೊತೆ ಹೋಗುವುದಿಲ್ಲ, ಬಿಜೆಪಿ ಜೊತೆ ಮೈತ್ರಿ ಇನ್ನು ಮುಗಿದ ಅಧ್ಯಾಯ ಎಂದು ಹೇಳಿತ್ತು.

ಈ ಮಧ್ಯೆ ನಿನ್ನೆ ಶಿವಸೇನೆ ಮತ್ತು ಎನ್ ಸಿಪಿ ನಾಯಕರು ಸಭೆ ಸೇರಿ ಸರ್ಕಾರ ರಚನೆ ಮಾಡುವುದೆಂದು ತೀರ್ಮಾನವಾಗಿ ಉದ್ಧವ್ ಠಾಕ್ರೆಯವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ನಿನ್ನೆ ಸಾಯಂಕಾಲ ಎನ್ ಸಿಪಿ ವರಿಷ್ಠ ಶರದ್ ಪವಾರ್ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು.

ಆದರೆ ರಾತ್ರೋರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಎನ್ ಸಿಪಿ ಬಿಜೆಪಿಗೆ ಬೆಂಬಲ ನೀಡಿ ಇಂದು ಬೆಳಗ್ಗೆ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸುವ ಮೂಲಕ ಒಂದು ತಿಂಗಳ ಮಹಾಡ್ರಾಮಾಕ್ಕೆ ತೆರೆಬಿದ್ದಿದೆ.

error: Content is protected !! Not allowed copy content from janadhvani.com