ಬ್ಲೂಮ್‌ಬರ್ಗ್.ಅ,27: ಅಮೆರಿಕದ ಮಿಲಿಟರಿ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಉತ್ತರ ಸಿರಿಯಾದ ಇಡ್ಲಿಬ್ ಪ್ರಾಂತ್ಯದ ಮೇಲೆ ಯುಎಸ್ ವಿಶೇಷ ಪಡೆಗಳು ನಡೆಸಿದ ದಾಳಿ ಮೂಲಕ ಬಗ್ದಾದಿಯನ್ನು ಕೊಲ್ಲಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ದೃಢೀಕರಿಸಿದ್ದಾರೆ.
‘ನಿನ್ನೆ ರಾತ್ರಿ ಅಮೆರಿಕ ಸೇನೆ ಜಗತ್ತಿನ ನಂ.1 ಉಗ್ರನನ್ನು ಬಲಿ ಪಡೆದಿದೆ. ಅಬು ಬಕರ್ ಅಲ್ ಬಾಗ್ದಾದಿ ಮೃತಪಟ್ಟಿದ್ದಾನೆ. ಬಾಗ್ದಾದಿ ಜಗತ್ತಿನ ಅತ್ಯಂತ ಕ್ರೂರ, ನಿರ್ದಯಿ ಸಂಘಟನೆ ಐಎಸ್‌ಐಎಸ್‌ನ ಸಂಸ್ಥಾಪಕ. ಆತ ಅಮೆರಿಕ ಸೇನೆಯ ದಾಳಿಗೆ ಸಿಕ್ಕು ಒಂದು ನಾಯಿಯಂತೆ, ಹೇಡಿಯಂತೆ ಸತ್ತಿದ್ದಾನೆ,’ ಎಂದು ಟ್ರಂಪ್ ಹೇಳಿದರು.
‘ಯೋಧರು ಆತನ ಬೆನ್ನು ಹತ್ತುತಲೇ ಆತ ಸುರಂಗವೊಂದಕ್ಕೆ ಓಡಿದ. ಅಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸತ್ತಿದ್ದಾನೆ. ಆತ್ಮಾಹುತಿ ಮಾಡಿಕೊಳ್ಳುವಾಗ ಆತ ತನ್ನ ಮೂವರು ಮಕ್ಕಳನ್ನು ಬಲಿಪಡೆದಿದ್ದಾನೆ,’ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ.
ದಾಳಿಯಲ್ಲಿ ನೆರವು ನೀಡಿದ ರಷ್ಯಾ, ಟರ್ಕಿ, ಸಿರಿಯಾ ಮತ್ತು ಇರಾಕ್ ರಾಷ್ಟ್ರಗಳಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.
‘ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡ ಕಾರಣ ಬಾಗ್ದಾದಿ ದೇಹ ಛಿದ್ರಗೊಂಡಿತು. ಆದರೆ, ದೇಹದ ಭಾಗಗಳ ಪರೀಕ್ಷೆ ನಡೆಸಿದಾಗ ಆತ ಬಾಗ್ದಾದಿ ಎಂದು ದೃಢಪಟ್ಟಿದೆ. ಜಗತ್ತನ್ನು ಬೆದರಿಸಲು ಪ್ರಯತ್ನಿಸುತ್ತಿದ್ದ ಕೊಲೆಗಡುಕ ತನ್ನ ಕೊನೆ ಕ್ಷಣಗಳನ್ನು ಅತ್ಯಂತ ಭಯದಿಂದ ಕಳೆದ. ಆತ ಸಂಪೂರ್ಣ ಆತಂಕಗೊಂಡಿದ್ದ. ಅಮೆರಿಕ ಸೇನೆಯನ್ನು ಕಂಡು ನಡುಗುತ್ತಿದ್ದ,’ ಎಂದೂ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ಇರಾಕ್‌ನ ಸಮಾರಾ ಮೂಲದ ಬಾಗ್ದಾದಿ, ಒಸಾಮಾ ಬಿನ್ ಲಾಡೆನ್ ನಂತರ ಕೊಲ್ಲಲ್ಪಡುವ ಹಿರಿಯ ಭಯೋತ್ಪಾದಕ ನಾಯಕ ಎನ್ನಲಾಗಿದೆ. ಆತನನ್ನು ಬಂಧಿಸಲು ಅಥವಾ ಕೊಲ್ಲಲು ಸಹಾಯ ಮಾಡಿದವರಿಗೆ 1 ಬಿಲಿಯನ್ ಡಾಲರ್ ಪಾವತಿಸುವುದಾಗಿ ಯುಎಸ್ ವಿದೇಶಾಂಗ ಇಲಾಖೆ 2011 ರಲ್ಲಿ ಘೋಷಿಸಿತ್ತು.