ಬೆಂಗಳೂರು: ಸಅದಿಯ್ಯಾ ಎಜುಕೇಶನಲ್ ಫೌಂಡೇಶನ್ ನ ಸ್ಫಟಿಕ ಮಹೋತ್ಸೋವ ಸಮಾರಂಭ ಹಾಗೂ ಅಸ್‌ಅದಿ ಪದವಿ ದಾನ ಘಟಿಕೋತ್ಸವವು ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಮ್ ಜಮಾಅತ್ ಉಪಾಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವು ಕಾವಳಕಟ್ಟೆ ಉದ್ಘಾಟಿಸಿದರು.
ಸನದುದಾನ ಭಾಷಣ ಮಾಡಿದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಪೊನ್ಮಲ ಅಬ್ದುಲ್ ಖಾದಿರ್ ಮುಸ್ಲಿಯಾರ್, ಸಮಾಜಕ್ಕೆ ಲೌಕಿಕ ಪದವಿಗಳನ್ನೂ ಹೊಂದಿರುವ, 20ರಷ್ಟು ಮೌಲವಿ ಫಾಝಿಲ್ ಅಸ್‌ಅದಿ ಪದವೀಧರರನ್ನು ಅರ್ಪಿಸುವ ಮೂಲಕ ಇತರ ಎಲ್ಲಾ ಸಂಸ್ಥೆಗಳಿಗೆ ಭಿನ್ನವಾದ ಸಾಧನೆ ಮಾಡಿರುವ ಸಅದಿಯಾ ಸಂಸ್ಥೆಯು ಅರ್ಥಪೂರ್ಣವಾಗಿ ಸ್ಫಟಿಕ ಮಹೋತ್ಸವ ಆಚರಿಸಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಾಮಿಅ ಬಿಲಾಲ್ ಮುಫ್ತಿ ಝುಲ್ಫಿಕರ್ ನೂರಿ, ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಜಿ.ಎ.ಬಾವ, ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಮಾಜಿ ಸಚಿವ ಎಂಎಂ ನಬಿ, ನಿವೃತ್ತ ಪೋಲಿಸ್ ಅಧಿಕಾರಿ ಮೀಋ ಅನೀಸ್ ಮುಂತಾದವರು ಮಾತನಾಡಿ ಸಂಸ್ಥೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.
ಸಂಸ್ಥೆಯ ಸ್ಫಟಿಕ ಸಂಭ್ರಮದ ಪ್ರಯುಕ್ತ ಡಾ.ಉಮರ್ ಹಾಜಿಯವರ ಸಹಭಾಗಿತ್ವದಲ್ಲಿ 15 ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವರಾದ ಸಿ.ಎಂ.ಇಬ್ರಾಹೀಂ,ಯುಟಿ ಖಾದರ್, ಎಂಎಂ ನಬಿ, ಎನ್ ಹಾರಿಸ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಖ್, ಎನ್ ನಂಜುಂಡಿ, ಅಬ್ದುಲ್ ಅಝೀಮ್, ಉದ್ಯಮಿ ಝಕರಿಯಾ ಜೋಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಸಾರಥಿ ಎನ್.ಕೆ.ಎಂ.ಶಾಫಿ ಸಅದಿ ಸ್ವಾಗತಿಸಿ, ವ್ಯವಸ್ಥಾಪಕ ಇಸ್ಮಾಈಲ್ ಸಅದಿ ಕಿನ್ಯ ಧನ್ಯವಾದ ಸಮರ್ಪಿಸಿದರು.