ನವದೆಹಲಿ(ಆ.16): ಭಾರತ ಸರಕಾರವು ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರವಾಗಿ ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕ್ಲೋಸ್ ಡೋರ್ ಮೀಟಿಂಗ್ ನಡೆಯಿತು. ಮಂಡಳಿಯ ಎಲ್ಲಾ ಐದು ಖಾಯಂ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ವ್ಯಕ್ತವಾದ ವಿಚಾರಗಳು ಅಧಿಕೃತವಾಗಿ ಬಹಿರಂಗವಾಗದಿದ್ದರೂ ಒಂದಷ್ಟು ವಿಷಯಗಳು ಬೆಳಕಿಗೆ ಬಂದಿವೆ. ಅದರ ಪ್ರಕಾರ, ಸಭೆಯಲ್ಲಿ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮಾತ್ರವೇ ಸಿಕ್ಕಿದೆ. ಉಳಿದ ನಾಲ್ಕು ರಾಷ್ಟ್ರಗಳು ಭಾರತದ ನಿಲುವಿಗೆ ಬೆಂಬಲ ನೀಡಿವೆ ಎನ್ನಲಾಗಿದೆ. ಒಟ್ಟಾರೆಯಾಗಿ, ಜಮ್ಮು-ಕಾಶ್ಮೀರ ವಿಚಾರದಲ್ಲಿ ಎಲ್ಲೆ ಮೀರದಂತೆ ಸಂಯಮ ವಹಿಸಬೇಕೆಂದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಭದ್ರತಾ ಮಂಡಳಿ ಬುದ್ಧಿ ಮಾತು ಹೇಳಿದೆ.
ಅಮೆರಿಕ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪ್ರಾರಂಭವಾದ ಯುಎನ್ಎಸ್ಸಿ ಭದ್ರತಾ ಮಂಡಳಿಯ ಅನೌಪಚಾರಿಕ ಸಮಾಲೋಚನೆ ಸಭೆ ಸುಮಾರು 70 ನಿಮಿಷಗಳ ಕಾಲ ನಡೆದಿದೆ. ಕಾಶ್ಮೀರದಲ್ಲಿ ನಡೆದಿರುವ ಬೆಳವಣಿಗೆಯಿಂದ ಎರಡೂ ದೇಶಗಳ ಮಧ್ಯೆ ಸೃಷ್ಟಿಯಾಗಿರುವ ಪ್ರಕ್ಷುಬ್ದ ವಾತಾವರಣದ ಬಗ್ಗೆ ಮಂಡಳಿ ಆತಂಕ ವ್ಯಕ್ತಪಡಿಸಿತು.