janadhvani

Kannada Online News Paper

ಭಯೋತ್ಪಾದಕ ದಾಳಿ ಸಾಧ್ಯತೆ- ಬೆಂಗಳೂರಿನಲ್ಲಿ ಹೈ ಅಲರ್ಟ್

ಬೆಂಗಳೂರು(ಆ. 16): ಭಯೋತ್ಪಾದಕ ದಾಳಿ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜನಸಂದಣಿ ಹೆಚ್ಚಾಗಿರುವ ನಗರದ ಪ್ರದೇಶಗಳಲ್ಲಿ ಜಾಗ್ರತೆಯಾಗಿರುವಂತೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ತಮ್ಮ ಸಿಬ್ಬಂದಿಗೆ ಅಧಿಕೃತವಾಗಿ ಸೂಚಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧ, ಮೆಜೆಸ್ಟಿಕ್, ಮೆಟ್ರೋ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಮಾಲ್, ಹೋಟೆಲ್ ಇತ್ಯಾದಿ ಜನಸಂದಣಿ ಇರುವ ಜಾಗಗಳಲ್ಲಿ ಭದ್ರತೆಯನ್ನು ಬಿಗಿಗಿಳಿಸುವಂತೆ  ನಗರದ ಎಲ್ಲಾ ವಲಯಗಳ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಅಧಿಕೃತವಾಗಿ ಭಾಸ್ಕರ್ ರಾವ್ ಸೂಚನೆ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಣೆ ಮಾಡಿದ್ಧೇವೆ ಎಂದು ನ್ಯೂಸ್18 ಕನ್ನಡಕ್ಕೆ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ಧಾರೆ. ಮಹಾನಗರಿಯಲ್ಲಿ ಇರುವ ಕಾರಣ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ. ಇಡೀ ಪೊಲೀಸ್ ವ್ಯವಸ್ಥೆ ಎಲ್ಲದಕ್ಕೂ ಸಜ್ಜಾಗಿರಲು ಸೂಚಿಸಿದ್ಧೇನೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಎಲ್ಲಾ ಕಡೆ ಸಿಸಿಟಿವಿ ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಮುಖ ಸ್ಥಳಗಳಲ್ಲೇ ಇದ್ದು ಖುದ್ದಾಗಿ ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳು ಮತ್ತು ವಾಹನಗಳನ್ನು ಕಂಡರೆ ತಪಾಸಣೆ ಮಾಡಬೇಕು. ಖಾಸಗಿ ಸೆಕ್ಯೂರಿಟಿ ಗಾರ್ಡ್ಗಳನ್ನೂ ಭದ್ರತೆಗೆ ಬಳಸಿಕೊಳ್ಳಬೇಕು. ಬೀಟ್ ಪೊಲೀಸರು ತಮ್ಮ ತಮ್ಮ ಪ್ರದೇಶಗಳಲ್ಲಿ ಎಚ್ಚರಿಕೆಯಿಂದಿರಬೇಕು. ಚೆಕ್ಪೋಸ್ಟ್ಗಳಲ್ಲಿ ಹಾಗೂ ನಗರದ ಒಳಗೆ ಮತ್ತು ನಗರದಿಂದ ಹೊರಹೋಗುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ಪಟ್ಟಿಯನ್ನೇ ಮಾಡಿ ಪ್ರಕಟಣೆ ಹೊರಡಿಸಿದ್ಧಾರೆ.

ಕಾಶ್ಮೀರ ವಿದ್ಯಮಾನಗಳ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಭಯೋತ್ಪಾದಕ ದಾಳಿಗಳಾಗಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಉಗ್ರರು ಒಳನುಸುಳಿದ್ದಾರೆ. ಉಗ್ರರಿಗೆ ಬೆಂಗಳೂರು ಸಾಫ್ಟ್ ಟಾರ್ಗೆಟ್ ಆಗಿರಬಹುದೆಂದೂ ಗುಪ್ತಚರರು ಅಲರ್ಟ್ ನೀಡಿದ್ಧಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಅತ್ತ, ಜಮ್ಮು-ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕ ಗುಂಪುಗಳಿಂದ ದಾಳಿಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆಗಿರುವಂತೆ ಅಲ್ಲಿರುವ ಭಾರತೀಯ ಸೇನೆ ಮತ್ತು ವಾಯುಸೇನೆ ಮತ್ತು ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

error: Content is protected !! Not allowed copy content from janadhvani.com