TV ಹಾಗೂ ಇನ್ನಿತರ ದೃಶ್ಯ ಶ್ರಾವ್ಯಮಾಧ್ಯಮ ಗಳಲ್ಲಿ ಭೂಕಂಪ ಸುನಾಮಿ ಗಳಿಂದ ಧರೆಗುರುಳಿದ ಮನೆಗಳ ಫೋಟೋಗಳನ್ನು ನೋಡಿದ್ದೆ. ಆದರೆ ಈ ಪರಿ ನೆಲಸಮವಾದ ದುರಂತ ಭೂಮಿ ಯಾವತ್ತೂ ನನ್ನ ಈ ಕಣ್ಣು ಕಂಡಿಲ್ಲ. ಇವತ್ತು ಬೆಳಿಗ್ಗೆ ಇಲ್ಲಿನ ಹಾಜಿ ಅಬ್ದುಸ್ಸಲಾಂ ಹಾಗೂ ಸಾಜಿದ್ ಮೌಲಾನಾ ನಮ್ಮನ್ನು ತಕಿಯಾ ಎಂಬ ಕುಗ್ರಾಮಕ್ಕೆ ಕರೆದೊಯ್ದರು. ಸರಳ ಸಜ್ಜನಿಕೆಯ ಹಾಜಿ ಅಬ್ದುಸ್ಸಲಾಂ ರವರ ಕಂಪೆನಿ ಸಂಪೂರ್ಣವಾಗಿ ನೀರಲ್ಲಿ ಮುಳುಗಿ ಕೋಟ್ಯಂತರ ರೂಪಾಯಿ ನಷ್ಟ ಹೊಂದಿದ್ದರೂ ಅದ್ಯಾವುದನ್ನೂ ನಮ್ಮೊಂದಿಗೆ ಹಂಚಿಕೊಳ್ಳದೆ. ನಮಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಟ್ಟು ನಮ್ಮೊಂದಿಗೇ ಇದ್ದರು.
ಅಂದಹಾಗೆ ನಾವು ಮಧ್ಯಾಹ್ನದೊತ್ತಿಗೆ ಬೆಳಗಾವಿ ಜಿಲ್ಲೆಯ ತಕಿಯಾ ಗ್ರಾಮಕ್ಕೆ ತಲುಪಿದೆವು.
ಅದ್ಹೇಗೆ ವರ್ಣಿಸಬೇಕು ಎಂದು ಅರ್ಥವಾಗುತ್ತಿಲ್ಲ. ಒಂದರ ಮೇಲೊಂದು ಮನೆಗಳು ಬಿದ್ದು ಪುಡಿಪುಡಿಯಾಗಿ ಚಿಪ್ಪಾಚೂರಾಗಿದೆ. ಬೈಕುಗಳು, ಟೈಲರಿಂಗ್ ಮಿಷನ್ ಗಳು, ಪಾತ್ರೆ ಹಾಗೂ ಬಟ್ಟೆಗಳೆಲ್ಲವೂ ಅದರಡಿಯಲ್ಲಿ ಅಪ್ಪಚ್ಚಿಯಾಗಿದೆ. ‘ನಮ್ಮ ಜೀವವೊಂದೇ ಉಳಿದಿದೆ ಗುರುಗಳೇ ಬಾಕಿ ಎಲ್ಲಾ ನೀರಲ್ಲಿ ಕೊಚ್ಚಿ ಹೋಗಿವೆ’ ಎಂದು ಗೋಗರೆಯುತ್ತಿದ್ದಾರೆ ಇವರು. ಕೇವಲ 27ಮನೆಗಳು ಮಾತ್ರ ಇರುವ ಈ ಹಳ್ಳಿಯಲ್ಲಿ 25ಮನೆಗಳು ಧರೆಗುದುರಿದೆ. ಎರಡೇ ಎರಡು ಮನೆಗಳು ಅಲ್ಪ ನೆಟ್ಟಗಿದೆ ನೋಡಿ. ಇವರಿಗೆ ಸಾಂತ್ವನ ಹೇಳುವುದಾದರೂ ಹೇಗೆ ಹೇಳಿಯಂತೆ?
ಹಳ್ಳಿ ಪ್ರದೇಶವಾದ್ದರಿಂದ ಕುಡಿಯಲು ಶುದ್ಧ ನೀರು ಕೂಡ ಸಿಗುತ್ತಿಲ್ಲ. ಇವತ್ತು ಲಕ್ಷ್ಮೇಶ್ವರದ ಎಸ್ಸೆಸ್ಸೆಫ್ ಕಾರ್ಯಕರ್ತರು ತಂದಿದ್ದ ಶುದ್ಧ ನೀರಿನ ಪೊಟ್ಟಣಗಳನ್ನು ಅಲ್ಲಿ ಹಂಚಿ. ನಮ್ಮಿಂದಾಗುವ ಸಹಾಯ ಸಹಕಾರದ ಭರವಸೆಯನ್ನು ನೀಡಿ ಬಂದೆವು. ಅಲ್ಲಿಂದ ಗೋಕಾಕ್ ಪಟ್ಟಣಕ್ಕೆ ಕೇವಲ 5-6ಕಿಲೋ ಮೀಟರ್ ಮಾತ್ರವಿರುವುದಾದರೂ ಮೊನ್ನೆಯ ಜಲಪ್ರಳಯಕ್ಕೆ ಆ ಸಂಪರ್ಕ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಈಗ ಆ ಹಳ್ಳಿಗೆ ತಲುಪಲು 25km ನಷ್ಟು ರಸ್ತೆ ಮಾರ್ಗವಾಗಿ ಹೋಗಬೇಕಾಗಿದೆ.
ಅಂದಹಾಗೆ ನಾಳೆ ಮಂಗಳೂರು, ಉಡುಪಿ, ಬೆಂಗಳೂರು ಭಾಗಗಳಿಂದ ನಮ್ಮ ಕಾರ್ಯಕರ್ತರು ಸಂಗ್ರಹಿಸಿದ ವಸ್ತ್ರಗಳು, ಪಾತ್ರೆಗಳು ಆಹಾರ ಸಾಮಗ್ರಿಗಳು ಹಲವು ಟ್ರಕ್ ಗಳ ಮೂಲಕ ಇಲ್ಲಿಗೆ ತಲುಪಲಿದೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಸಹಿತ ಇನ್ನಷ್ಟು ರಾಜ್ಯ ನಾಯಕರು ಇಲ್ಲಿ ನಮ್ಮೊಂದಿಗೆ ಸೇರಲಿದ್ದಾರೆ. ಕೆಸರು ತುಂಬಿ ಸಂಪೂರ್ಣ ಹದಗೆಟ್ಟಿರುವ ಮನೆಗಳನ್ನು ಶುಚಿಗೊಳಿಸಲು ಕೆಲವು ಕಾರ್ಯಕರ್ತರು ಇಲ್ಲಿ ತಲುಪಲಿದ್ದಾರೆ. ಸಂತೃಸ್ತರೊಂದಿಗೆ ಸೇರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ನಾವು ಸಕಲ ಸಿದ್ಧತೆ ಗಳನ್ನು ಮಾಡಿಕೊಂಡಿದ್ದೇವೆ.
ಅತ್ತ ನಮ್ಮ ಹಿರಿಯ ನಾಯಕರಾದ SP ಉಸ್ತಾದ್, ಝೈನಿ ಉಸ್ತಾದ್, PP ಉಸ್ತಾದ್ ಸಹಿತವಿರುವ ನಾಯಕರ ದಂಡು SYS ನ ಟೀಂ ಇಸ್ವಾಬಾ ದೊಂದಿಗೆ ಕೊಡಗಿನ ಸಂತೃಸ್ತರ ಸಾಂತ್ವನಕ್ಕಾಗಿ ಕೆಸರುಗದ್ದೆಯಾಗಿ ಮಾರ್ಪಟ್ಟಿರುವ ಅಲ್ಲಿನ ಮನೆಗಳನ್ನು ಶುಚಿಗೊಳಿಸಲು ತೆರಳಿದ್ದಾರೆ.
ಒಟ್ಟಿನಲ್ಲಿ ಸಂತೃಸ್ತರೊಂದಿಗೆ ಸರಕಾರ ಇದೆಯೋ ಇಲ್ಲವೋ ಗೊತ್ತಿಲ್ಲ ನಾವಂತೂ ನಮ್ಮ ಮಿತ್ರರಜೊತೆಗಿದ್ದೇವೆ. ಅಲ್ಲಿ ಜಾತಿ ಧರ್ಮ ವರ್ಗ ವರ್ಣ ಪಕ್ಷ ಪಂಥವೆಂಬ ವ್ಯತ್ಯಾಸವಿಲ್ಲ all indians are my brothers and sisters ಎಂಬ ಘೋಷಣೆಯೊಂದಿಗೆ…
ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ…
ಹಾಫಿಝ್ ಸುಫ್ಯಾನ್ ಸಖಾಫಿ
(ಉಪಾಧ್ಯಕ್ಷ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
14/8/2019 10.00pm ಗೋಕಾಕ್






