janadhvani

Kannada Online News Paper

2008ರಲ್ಲಿ ಗೋಲಿಬಾರ್!, 2019 ರಲ್ಲಿ ನೆರೆ ಸಂತ್ರಸ್ತರ ಮೇಲೆ ಲಾಠಿ ಚಾರ್ಚ್!! ಇದೇನಾ ಯಡಿಯೂರಪ್ಪ ಸಾಧನೆ?

ಗದಗ (ಆಗಸ್ಟ್.09); ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಮುಂದಾದ ನಿರಾಶ್ರಿತರ ಮೇಲೆ ಪೊಲೀಸರು ಲಾಠಿ ಚಾರ್ಚ್ ಮಾಡಿ ವಿಕೃತಿ ಮೆರೆದಿರುವ ಘಟನೆಗೆ ಗದಗ ಜಿಲ್ಲೆ ಸಾಕ್ಷಿಯಾಗಿದೆ.

ಇಂದು ಬೆಳಗ್ಗೆ ಬಾಗಲಕೋಟೆಯಲ್ಲಿ ಅತಿವೃಷ್ಟಿಯಿಂದಾದ ಪರಿಣಾಮದ ಕುರಿತು ಅವಲೋಕನ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸಂಜೆ ವೇಳೆಗೆ ಮಳೆಗೆ ತುತ್ತಾಗಿ ತತ್ತರಿಸುತ್ತಿರುವ ಗದಗ ಜಿಲ್ಲೆಗೆ ಭೇಟಿ ನೀಡಿದ್ದರು.

ಈ ವೇಳೆ ನೆರೆಯಿಂದಾಗಿ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರು ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ತಮಗೆ ಸೂಕ್ತ ಪಡಿಹಾರ ನೀಡಿ ಎಂದು ಕೇಳಿಕೊಂಡಿದ್ದಾರೆ.

ಆದರೆ, ಈ ವೇಳೆ ಜನಸಂದಣಿ ಅಧಿಕವಾದ ಕಾರಣ ನಿರಾಶ್ರಿತರ ಮೇಲೆಯೇ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಲಾಠಿ ಚಾರ್ಚ್ ಮಾಡಿ ಜನರನ್ನು ಜದುರಿಸಿ ನಂತರ ಅಲ್ಲಿಂದ ಯಡಿಯೂರಪ್ಪನವರನ್ನು ಕಳಿಸಿಕೊಟ್ಟಿದ್ದಾರೆ.

ನೆರೆ ಸಂತ್ರಸ್ತ ನಿರಾಶ್ರಿತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಗೆ ಎಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಎದುರಾಗುತ್ತಿದೆ.

ಅಲ್ಲದೆ, ಪೊಲೀಸರು ನಿರಾಶ್ರಿತರ ಮೇಲೆ ಲಾಠಿ ಚಾರ್ಚ್ ಮಾಡುವ ವೇಳೆ ಸಿಎಂ ಯಡಿಯೂರಪ್ಪ ಪೊಲೀಸರಿಗೆ ಲಾಠಿ ಚಾರ್ಚ್ ಮಾಡದಂತೆ ಒಂದೇ ಒಂದು ಮಾತು ಸಹ ಹೇಳದೆ ಇರುವುದು ಸಹ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

2019 ಲಾಠಿ ಚಾರ್ಚ್ 2008ರಲ್ಲಿ ಗೋಲಿಬಾರ್!

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಕೇವಲ ಎರಡು ವಾರವಾಗಿದೆಯಷ್ಟೆ. ಆದರೆ, ಇಷ್ಟರಲ್ಲೇ ಅವರ ಎದುರೇ ಪ್ರವಾಹಕ್ಕೆ ತುತ್ತಾದ ನಿರಾಶ್ರಿತರ ಮೇಲೆ ಲಾಠಿ ಚಾರ್ಚ್ ನಡೆದಿದೆ.

ಆದರೆ, ಅದು 2008ರ ಸಮಯ. ಆಗಿನ್ನು ಯಡಿಯೂರಪ್ಪ ಸಿಎಂ ಆಗಿ ಕೇವಲ ಒಂದು ವಾರ ಕಳೆದಿತ್ತು. ಪ್ರಮಾಣ ವಚನ ಸಮಾರಂಭದಲ್ಲಿ ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದ ಇದೇ ಯಡಿಯೂರಪ್ಪ ಹಾವೇರಿಯಲ್ಲಿ ರಸಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ಗೆ ಆದೇಶಿಸಿದ್ದರು. ಪರಿಣಾಮ ಇಬ್ಬರು ರೈತರು ಸ್ಥಳದಲ್ಲಿ ಮೃತಪಟ್ಟಿದ್ದರು.

ಕರ್ನಾಟಕದ ಜನತೆ ಆ ಕಹಿ ಘಟನೆಯನ್ನು ಮರೆಯುವ ಮುನ್ನವೇ, ಅದೇ ರೀತಿ ಸಾಮಾನ್ಯ ಜನರ ಮೇಲೆ ದರ್ಪ ಮೆರೆಯುವ ಪೊಲೀಸರ ವರ್ತನೆ ಮತ್ತೆ ಅದೇ ಯಡಿಯೂರಪ್ಪನವರ ಅಧಿಕಾರದ ದಿನಗಳಲ್ಲೆ ಕಂಡು ಬರುತ್ತಿರುವುದು ವಿಷಾಧನೀಯ.

error: Content is protected !! Not allowed copy content from janadhvani.com