ಮಕ್ಕಾ: ಉಮ್ರಾ ಯಾತ್ರಿಕರ ಸಂಖ್ಯೆಯಲ್ಲಿ ಬಾರೀ ಏರಿಕೆ ಕಂಡು ಬಂದಿದ್ದು, ಇದು ವರೆಗೆ ಎಪ್ಪತ್ತೈದು ಲಕ್ಷ ಉಮ್ರಾ ವಿಸಾಗಳನ್ನು ಅನುಮತಿಸಲಾಗಿದೆ. ವಿಷನ್ 2030 ರ ಭಾಗವಾಗಿ ಉಮ್ರಾ ಯಾತ್ರಿಕರನ್ನು ಗುರಿಯಾಗಿಸಿ, ಹೆಚ್ಚಿನ ವಿಸಾಗಳನ್ನು ಅನುಮತಿಸಲಾಗಿದೆ.
ಪ್ರತೀ ವರ್ಷ ಮೂವತ್ತು ಮಿಲಿಯನ್ ವಿದೇಶೀಯರ ಆಗಮನವನ್ನು ಸೌದಿ ಅರೇಬಿಯಾ ನಿರೀಕ್ಷಿಸುತ್ತಿದೆ ಎಂದು ಹಜ್ ಖಾತೆಯ ಸಹ ಸಚಿವ ಡಾ. ಅಬ್ದುಲ್ ಫತ್ತಾಹ್ ಬಿನ್ ಸುಲೈಮಾನ್ ಮುಶಾತ್ ತಿಳಿಸಿದ್ದಾರೆ. ಹಜ್-ಉಮ್ರಾ ಸಚಿವಾಲಯದ ಆನ್ ಲೈನ್ ಪೋರ್ಟಲ್ ಆದ ‘ಮಖಾಂ’ ಮೂಲಕ ಉಮ್ರಾ ಯಾತ್ರೆಗೆ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಅರ್ಜಿ ಸಲ್ಲಿಸ ಬಹುದಾಗಿದ್ದು, ಆ ಕಾರಣದಿಂದಾಗಿ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿದೆ ಎನ್ನಲಾಗಿದೆ.
ಮಖಾಂ ಮೂಲಕ ವಿಸಾ ಕ್ರಮಗಳನ್ನು ವೇಗವಾಗಿ ಮಾಡಬಹು ಎಂಬುದು ವಿಶೇಷತೆಯಾಗಿದೆ. ಅಲ್ಲದೆ ಹರಮ್ ಗಳ ಉಮ್ರಾ ವಲಯದಲ್ಲಿ ಕಾರ್ಯಾಚರಿಸುವ ವಿವಿಧ ಕಂಪೆನಿಗಳ ಪ್ಯಾಕೇಜ್ಗಳನ್ನು ಇನ್ನು ಮುಂದೆ ಆಯ್ಕೆ ಮಾಡಬಹುದಾಗಿದೆ. ಹರಮ್ನ ಹೋಟೆಲ್ ಬಾಬ್ತುಗಳು, ಕಂಪೆನಿಗಳು ಯಾತ್ರಾರ್ಥಿಗಳಿಗೆ ನೀಡುವ ಸೇವೆಗಳು ಮುಂತಾದವುಗಳನ್ನು ಆನ್ಲೈನ್ ಮೂಲಕ ಆಯ್ಕೆ ಮಾಡಲು ಅವಕಾಶವಿದೆ.
72,01,851 ಉಮ್ರಾ ಯಾತ್ರಿಕರು ಈಗಾಗಲೇ ಸೌದಿ ಅರೇಬಿಯಾ ತಲುಪಿದ್ದಾರೆ. ಹೆಚ್ಚಿನ ಯಾತ್ರಿಕರು ಪಾಕಿಸ್ತಾನದಿಂದ ಬಂದವರಾಗಿದ್ದು, ಹದಿನೈದು ಲಕ್ಷ ಯಾತ್ರಿಕರು ಆ ದೇಶದಿಂದ ಬಂದಿದ್ದಾರೆ. ಇಂಡೋನೇಷ್ಯಾ ದಿಂದ ಒಂಬತ್ತು ಲಕ್ಷ, ಭಾರತದಿಂದ ಆರು ಲಕ್ಷ ಯಾತ್ರಿಕರು ಬಂದಿಳಿದಿದ್ದಾರೆ. ಭಾರತವು ಯಾತ್ರಿಕರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಆ ಪೈಕಿ ಹೆಚ್ಚಿನವರು ಕೇರಳೀಯರಾಗಿದ್ದಾರೆ.
63 ಲಕ್ಷ ಉಮ್ರಾ ಯಾತ್ರಿಕರು ವಿಮಾನ ಮಾರ್ಗವಾಗಿ ಬಂದಿದ್ದು, ಒಂದು ಲಕ್ಷದ ಹತ್ತೊಂಬತ್ತು ಸಾವಿರ ಯಾತ್ರಿಕರು ಹಡಗಿನ ಮೂಲಕ ಬಂದಿದ್ದಾರೆ. ಆರು ಲಕ್ಷದ ತೊಂಬತ್ತಾರು ಸಾವಿರ ರಸ್ತೆ ಮಾರ್ಗವಾಗಿಯೂ ಉಮ್ರಾ ನಿರ್ವಹಣೆಗಾಗಿ ಬಂದಿದ್ದಾರೆ. ಆಂತರಿಕ ಯುದ್ಧದಿಂದಾಗಿ ಯಮನ್, ಸಿರಿಯಾ ಮುಂತಾದ ದೇಶಗಳಿಂದ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.