ಮಂಗಳೂರು: ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರ ಜತೆಗೆ ಆ ಶಾಲೆಗಳ ಕನ್ನಡ ಮಾಧ್ಯಮ ತರಗತಿಗಳಲ್ಲೂ “ನಲಿ-ಕಲಿ’ ಕಲಿಕಾ ವ್ಯವಸ್ಥೆಯಡಿ ಇಂಗ್ಲಿಷ್ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಈ ವರ್ಷ ಆಯ್ದ ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆರಂಭಿಸಿದ ಆಂಗ್ಲ ಮಾಧ್ಯಮ ಬೇಡಿಕೆ ತೀರಾ ಹೆಚ್ಚಿದೆ. ಆದರೆ 30 ಮಕ್ಕಳ ಮಿತಿ ಇರುವುದರಿಂದ ಅನೇಕ ಮಕ್ಕಳು- ಹೆತ್ತವರಿಗೆ ನಿರಾಶೆಯಾಗಿದೆ. ಇದಕ್ಕೆ ಇಲಾಖೆ ಕಂಡುಕೊಂಡಿರುವ ಸಾಂತ್ವನ ಸೂತ್ರವೇ “ನಲಿ-ಕಲಿ’ಯಲ್ಲಿ ಆಟ – ಚಟುವಟಿಕೆಗಳ ಮೂಲಕ ಇಂಗ್ಲಿಷ್ ಭಾಷೆಯನ್ನು ಹೆಚ್ಚು ಚೆನ್ನಾಗಿ ಬೋಧಿಸುವುದು.
ಇಂಗ್ಲಿಷ್ ಮಾಧ್ಯಮ ತರಗತಿ ಆರಂಭವಾಗಿರುವ ಆಯ್ದ ಒಂದು ಸಾವಿರ ಶಾಲೆಗಳಲ್ಲಿಯೇ ಇದು ನಡೆಯಲಿದ್ದು, ಇದಕ್ಕಾಗಿ ಶೀಘ್ರವೇ ಆ್ಯಕ್ಟಿವಿಟಿ ಕಾರ್ಡ್‌ಗಳು ವಿತರಣೆಯಾಗಲಿವೆ. ಈ ವರ್ಷದ ಯಶಸ್ಸನ್ನು ಗಮನಿಸಿ ಮುಂದಿನ ವರ್ಷ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇದನ್ನು ಜಾರಿಗೊಳಿಸುವ ಯೋಚನೆ ಇಲಾಖೆಗಿದೆ.
“ನಲಿ-ಕಲಿ’ಯಲ್ಲಿ ಇಂಗ್ಲಿಷ್ ಪಠ್ಯ ಆಧಾರಿತ ಬೋಧನೆ ಈಗಾಗಲೇ ಇದೆ. ಇನ್ನು ಚಟುವಟಿಕೆ ಆಧಾರಿತ ಕಲಿಕೆ ಸೇರಿಕೊಳ್ಳಲಿದೆ. ಇನ್ನುಳಿದ ಅಧ್ಯಯನ ಕನ್ನಡ ಮಾಧ್ಯಮದಲ್ಲಿಯೇ ನಡೆಯುತ್ತದೆ.
ರಾಜ್ಯದಲ್ಲಿ ಒಟ್ಟು 43 ಸಾವಿರ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಿವೆ. ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವ ಆಯ್ದ 1,000 ಸಾವಿರ ಶಾಲೆಗಳ ಕನ್ನಡ ಮಾಧ್ಯಮದ 1ರಿಂದ 3ನೇ ತರಗತಿಗಳಿಗೆ “ನಲಿ-ಕಲಿ’ಯ ಇಂಗ್ಲಿಷ್ ಪಠ್ಯದ ಜತೆಗೆ ಆ್ಯಕ್ಟಿವಿಟಿ ಕಾರ್ಡ್ ಕೂಡ ನೀಡಲಾಗುತ್ತದೆ. ಇದನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ 43 ಸಾವಿರ ಶಾಲೆಗಳಿಗೆ ವಿಸ್ತರಿಸಲಾಗುತ್ತದೆ.
ಈಗಾಗಲೇ ಆಂಗ್ಲ ಶಿಕ್ಷಣ ಬೋಧಿಸಲು ಆಯ್ಕೆಯಾದ ಒಬ್ಬ ಶಿಕ್ಷಕರಿಗೆ ಅಗತ್ಯವಿರುವ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಅದೇ ಶಿಕ್ಷಕರು “ನಲಿ-ಕಲಿ’ಯಲ್ಲಿ ಚಟುವಟಿಕೆ ಆಧಾರಿತ ಇಂಗ್ಲಿಷ್ ಹೇಳಿಕೊಡಲಿದ್ದಾರೆ. ಕೆಲವು ಶಾಲೆಗಳಲ್ಲಿ 4 ಮತ್ತು 5ನೇ ತರಗತಿಯ ಆಂಗ್ಲ ಶಿಕ್ಷಕರನ್ನು ಇದಕ್ಕೆ ಗೊತ್ತುಪಡಿಸಲಾಗಿದೆ ಎಂದು ಸರ್ವ ಶಿಕ್ಷಾ ಅಭಿಯಾನದ ಪ್ರಮುಖರು ಮಾಹಿತಿ ನೀಡಿದ್ದಾರೆ.
ಏನಿದು ಆ್ಯಕ್ಟಿವಿಟಿ ಕಾರ್ಡ್?: ಇದು ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಕೆ ವಿಧಾನ. ಕಾರ್ಡ್ ಎಂಬುದು ಹೆಸರಷ್ಟೆ, ಕಿಟ್ ಎನ್ನಲಡ್ಡಿಯಿಲ್ಲ. 1ರಿಂದ 3ನೇ ತರಗತಿಗಳ ಮಕ್ಕಳನ್ನು ತಲಾ 30 ವಿದ್ಯಾರ್ಥಿಗಳ ಯೂನಿಟ್‌ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಯೂನಿಟ್‌ಗೆ ಒಂದರಂತೆ ಕಲಿಕಾ ಸಾಮಗ್ರಿ ಮತ್ತು ಕಲಿಕಾ ವಿಧಾನ ಒಳಗೊಂಡ ಒಂದು ಸೆಟ್ ಆ್ಯಕ್ಟಿವಿಟಿ ಕಾರ್ಡ್ ನೀಡಲಾಗುತ್ತದೆ.
ಇದರಲ್ಲಿರುವ ಸೂಚನೆಗಳ ಅನುಸಾರ ಶಿಕ್ಷಕರು ಬೋಧಿಸಬೇಕು. ಮೊದಲ 3 ತಿಂಗಳಲ್ಲಿ ಪದ, ಉಚ್ಚಾರ, ಆಲಿಸುವಿಕೆ, ಸಂಭಾಷಣೆ, ಬರವಣಿಗೆ ಸಂಬಂಧಿತ ಆಟಗಳು, ವಿವಿಧ ಆಟಗಳ ಮೂಲಕ ಇಂಗ್ಲಿಷ್ ಕಲಿಕೆ; ಅನಂತರ ಓದುವುದು ಮತ್ತು ಬರವಣಿಗೆಗೆ ಒತ್ತು ನೀಡಲಾಗುತ್ತದೆ.