ಹೌದು,
ಅದು 2010 ರ ಮೇ 22. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಘೋರ ದುರಂತವೊಂದು ನಡೆದ ದಿನ.
ಜಿಲ್ಲೆಯ ಜನತೆಯು ನಿದ್ದೆಕಣ್ಣಿನಿಂದ ಎದ್ದೇಳುವ ಸಮಯವದು. ಆದರೆ ಅದಾಗಲೇ 158 ಅಮಾಯಕ ಜೀವಗಳು ಈ ಐಹಿಕವಾದ ಲೋಕಕ್ಕೆ ವಿದಾಯ ಹೇಳಿಯಾಗಿತ್ತು..!!
2010 ರ ಮೇ 22 ಮುಂಜಾನೆ 6.30 ರ ಸಮಯದಲ್ಲಿ ದುಬಾಯಿಯಿಂದ ಮಂಗಳೂರಿಗೆ ಹೊರಟಂತಹ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣ ತಲುಪುವ ಕ್ಷಣಾರ್ಧದ ಮುಂಚೆ ಕೆಂಜಾರು ಬಳಿ ದುರಂತಕ್ಕೀಡಾಗಿ 19 ಎಳೆಯ ಮಕ್ಕಳು ಸೇರಿ 158 ಮಂದಿ ಬಲಿಯಾಗಿದ್ದರು.
ಅದೆಷ್ಟೋ ತಾಯಿಯಂದಿರು ವರ್ಷಗಳ ಕಾಯುವಿಕೆಯ ಬಳಿಕ ಮನೆಗೆ ಆಗಮಿಸುತ್ತಾ ಇರುವ ತನ್ನ ಮುದ್ದು ಮಗನ ಮುಖವನ್ನು ನೋಡಲು ಆಸೆಗಣ್ಣಿನಿಂದ ಕಾಯುತ್ತಾ ಇದ್ದರು.
ವಯಸ್ಸಿಗೆ ಬಂದ ತಂಗಿಯ ಮದುವೆಯ ಕನಸನ್ನು ಈಡೇರಿಸಲು ಊರಿಗೆ ಬರುತ್ತಿರುವ ಅಣ್ಣನ ಕುರಿತಾದ ಅದಮ್ಯವಾದ ಕನಸುಗಳನ್ನು ಹೊತ್ತುಕೊಂಡ ಅದೆಷ್ಟೋ ಸಹೋದರಿಯರಿದ್ದರು!.
ತನ್ನ ನೋವು ನಲಿವುಗಳಿಗೆ ಸಾಂತ್ವನಿಯಾಗಿ, ಇಷ್ಟ -ಕಷ್ಟಗಳಿಗೆ ಜತೆಗಾರನಾಗಿ ತನ್ನ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಅತ್ತ ಮರುಭೂಮಿಯ ಸುಡು ಬಿಸಿಲಿನ ಬೇಗುದಿಯಲ್ಲಿ ದುಡಿಯುತ್ತಿರುವ ತನ್ನ ಕೆಲಸಗಳಿಗೆ ವಿರಾಮ ಘೋಷಿಸಿ ತವರಿಗೆ ಹಿಂದಿರುಗುತ್ತಿದ್ದ ತನ್ನ ಗಂಡನ ಬರುವಿಕೆಯ ನಿರೀಕ್ಷೆಯಲ್ಲಿ ಅದೆಷ್ಟೋ ಸಹೋದರಿಯರು ಕಾಯುತ್ತಿದ್ದರು.
ವಾಸ್ತವ ಬದುಕಿನ ಅರಿವು ಮೂಡಿರದ ಮುದ್ದು ಮಕ್ಕಳು ಸುದೀರ್ಘ ಸಮಯದ ಕಾಯುವಿಕೆಯ ನಂತರ ತನ್ನ ತಂದೆಯ ಜತೆ ಕುಣಿದು, ನಲಿದಾಡುವ ತವಕದಲ್ಲಿದ್ದರು.
ಆದರೆ ಸರ್ವಶಕ್ತನ ವಿಧಿಯ ತೀರ್ಮಾನವೇ ಬೇರೆಯಾಗಿತ್ತು.
ಎಲ್ಲರ ಆಸೆ, ಆಕಾಂಕ್ಷೆ, ನಿರೀಕ್ಷೆಗಳನ್ನು ಹುಸಿಯಾಗಿಸಿ ಗಂಡು -ಹೆಣ್ಣು, ಮಕ್ಕಳು -ವಯಸ್ಕರು ಅನ್ನುವ ಭೇದ -ಭಾವವಿಲ್ಲದೆ 158 ಮಂದಿ ವಿಧಿಯ ಆಹ್ವಾನಕ್ಕೆ ಓಗೊಡಲೇ ಬೇಕಾಯಿತು.
ಅಲ್ಲಿ ಕಮರಿ ಹೋದದ್ದು ಕೇವಲ ಮನುಷ್ಯ ಜೀವಗಳು ಮಾತ್ರವಾಗಿರಲಿಲ್ಲ. ಅದೆಷ್ಟೋ ಮನೆಯ ಆಧಾರ ಸ್ಥಂಭಗಳಾಗಿದ್ದವು.
ಅದೆಷ್ಟೋ ಸಹೋದರಿಯರ ಕಣ್ಣೀರ ಬದುಕಿಗೆ ಸಾಂತ್ವನಿಯಾಗಬೇಕಾಗಿದ್ದವರಾಗಿದ್ದರು.
ಘೋರ ದುರಂತವೊಂದು ನಡೆದು ವರುಷಗಳು ಒಂಭತ್ತು ಉರುಳಿ ಹೋದರೂ ಇಂದಿಗೂ ಅದೆಷ್ಟೋ ಕುಟುಂಬಗಳು ಕಣ್ಣೀರ ಬದುಕನ್ನು ನಡೆಸುತ್ತಾ ಇದ್ದಾರೆ. ಅದೆಷ್ಟೋ ಮನೆಗಳಿಂದ ಇನ್ನೂ ಕೂಡ ಸೂತಕದ ಛಾಯೆ ಮಾಸಿಲ್ಲ..!!
ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ ಸರ್ವಶಕ್ತನು ಸಹನೆಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ.
ಸ್ನೇಹಜೀವಿ ಅಡ್ಕ