ನವದೆಹಲಿ:ದೇಶಭ್ರಷ್ಟ, ಬಹುಕೋಟಿ ವಂಚಕ ನೀರವ್ ಮೋದಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಲಂಡನ್ ವೆಸ್ಟ್‌ಮಿನ್‌ಸ್ಟರ್ ಕೋರ್ಟ್ ತಿರಸ್ಕರಿಸಿದೆ.
ಈ ಮೂಲಕ ಜಾಮೀನು ಪಡೆದು ಜೈಲಿನಿಂದ ಹೊರ ಬರುವ ನೀರವ್ ಮೋದಿಯ ಎರಡನೇ ಪ್ರಯತ್ನವೂ ವಿಫಲವಾಗಿದೆ.ಪ್ರಕರಣದ ಮುಂದಿನ ವಿಚಾರಣೆ 24ರಂದು ನಡೆಯಲಿದ್ದು, ಮೇ 30ರಂದು ಪೂರ್ಣ ಪ್ರಮಾಣದ ವಿಚಾರಣೆ ನಡೆಯಲಿದೆ ಎಂದು ವೆಸ್ಟ್‌ಮಿನ್‌ಸ್ಟರ್ ಕೋರ್ಟ್ ತಿಳಿಸಿದೆ.
ಮಾರ್ಚ್ 19ರಂದು ಬಂಧಿತನಾಗಿದ್ದ ನೀರವ್ ಮೋದಿ ಸದ್ಯ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಕಳೆದ ತಿಂಗಳು ನಡೆದ ವಿಚಾರಣೆ ವೇಳೆ, ಸಾಕ್ಷಿದಾರರಿಗೆ ಈತ ಜೀವಬೆದರಿಕೆ ಒಡ್ಡಿರುವುದು ಹಾಗೂ ಸಾಕ್ಷ್ಯಾಧಾರಗಳ ನಾಶಕ್ಕೆ ಪ್ರಯತ್ನಿಸಿದ್ದು ಬೆಳಕಿಗೆ ಬಂದಿತ್ತು.
ಇತ್ತೀಚೆಗಷ್ಟೇ ನೀರವ್ ಮೋದಿ ಲಂಡನ್ನ ಹಾಲ್ಬಾರ್ನ್ ಮೆಟ್ರೋ ಸ್ಟೇಷನ್ನಲ್ಲಿ ಬಂಧನಕ್ಕೊಳಗಾಗಿದ್ದ. ಇಂದು ಆತನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13,500 ಕೋಟಿ ರೂ. ಸಾಲ ಪಡೆದಿದ್ದ ನೀರವ್ ಮೊದಿ, ಮರುಪಾವತಿ ಮಾಡದೇ ಭಾರತದಿಂದ ಕಾಲ್ಕಿತ್ತಿದ್ದ. ಸದ್ಯ ಭಾರತದ ಪರ ವಕೀಲರು ನ್ಯಾಯಾಲಯದಲ್ಲಿ ನೀರವ್ ಮೋದಿ ವಿರುದ್ಧ ಧಾವೆ ಹೂಡಿದ್ದಾರೆ. ಭಾರತಕ್ಕೆ ಬಹು ಕೋಟಿ ವಂಚಕನನ್ನು ಹಸ್ತಾಂತರಿಸುವಂತೆಯೂ ಮನವಿ ಮಾಡಲಾಗಿದೆ.
“ನೀರವ್ ಮೋದಿ ಮೇಲಿರುವ ಗುರುತರ ಆರೋಪಗಳಿಗೆ ತಕ್ಕ ಸಾಕ್ಷಿಗಳಿವೆ ಮತ್ತು ಆತನಿಗೆ ಜಾಮೀನು ನೀಡಿದರ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪುರಾವೆಗಳನ್ನು ತಿರುಚುವ ಸಾಧ್ಯತೆ ಇದೆ. ಈ ಕಾರಣದಿಂದ ಜಾಮೀನು ನೀಡಬೇಡಿ,” ಎಂದು ಟಾಬಿ ಕ್ಯಾಡ್ಮ್ಯಾನ್ ಕೋರ್ಟ್ಗೆ ಕಳೆದ ವಿಚಾರಣೆ ದಿನ ಮನವಿ ಮಾಡಿದ್ದರು. ಟಾಬಿ ಕ್ಯಾಡ್ಮ್ಯಾನ್ ಭಾರತದ ಪರ ಇಂಗ್ಲೆಂಡ್ನಲ್ಲಿ ವಾದ ಮಂಡಿಸುತ್ತಿದ್ದಾರೆ.
ಮುಂದುವರೆದಿದ್ದ ಅವರು, ನೀರವ್ ಮೋದಿ ದೇಶ ಬಿಟ್ಟು ಓಡಿಹೋಗುವ ಆತುರದಲ್ಲಿದ್ದಾನೆ ಎಂಬುದು ಕೂಡ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. “ಕೋಟ್ಯಾಂತರ ರೂಪಾಯಿ ಮೌಲ್ಯದ ಡೈಮಂಡ್, ಚಿನ್ನ ಮತ್ತು ಮುತ್ತುರತ್ನಗಳು ನೀರವ್ ಮೋದಿ ಬಳಿ ಇವೆ. ವಿಚಾರಣೆ ವೇಳೆ ಪೊಲೀಸರಿಗೆ ಮೋದಿ ಎಂದೂ ಸಹಕಾರ ನೀಡಿಲ್ಲ. ನೀರವ್ ಮೋದಿಗೆ ಜಾಮೀನು ನೀಡಲೇಬಾರದು,” ಎಂದು ಕ್ಯಾಡ್ಮ್ಯಾನ್ ವಾದ ಮಂಡಿಸಿದ್ದರು.
ಭಾರತಕ್ಕೆ ಗಡೀಪಾರು ಶಿಕ್ಷೆ ಎದುರಿಸುತ್ತಿರುವ ಇನ್ನೊಬ್ಬ ದೇಶಭ್ರಷ್ಟ ವಿತ್ತಾಪರಾಧಿ ಉದ್ಯಮಿ ವಿಜಯ್ ಮಲ್ಯ ಪರ ವಕಾಲತು ನಡೆಸಿದ ತಂಡವೇ ನೀರವ್ ಮೋದಿ ಪರವೂ ವಕಾಲತು ನಡೆಸುತ್ತಿದೆ.
ವಾದ ಪ್ರತಿವಾದಗಳನ್ನು ಆಲಿಸಿದ ನಂತರ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯ ತಿರಸ್ಕರಿಸಿತು.