ವಾಷಿಂಗ್ಟನ್, ಮಾ.23- ರಷ್ಯಾ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ 2016ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ಬಹುನೀರಿಕ್ಷಿತ ವರದಿಯನ್ನು ವಿಶೇಷ ಕಾನೂನು ತಜ್ಞ ರಾಬರ್ಟ್ ಮ್ಯುಲರ್ ಇಂದು ಅಮೆರಿಕಾ ಅಟಾರ್ನಿ ಜನರಲ್ ಅವರಿಗೆ ಸಲ್ಲಿಸಿದ್ದಾರೆ.
ಎರಡು ವರ್ಷಗಳ ಕಾಲ ಅಮೆರಿಕ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಟ್ರಂಪ್ ಅವರ ಮೇಲೆ ಈ ವರದಿಯ ಕರಾಳ ಛಾಯೆ ಆವರಿಸಿದ್ದು, ಮುಂದಿನ ಬೆಳವಣಿಗೆ ಕುತೂಹಲ ಕಾರಿಯಾಗಿದೆ.
ಗೌಪ್ಯತೆಯ ಕಾರಣ ಮ್ಯುಲರ್ ಅವರ ವರದಿಯನ್ನು ಸದ್ಯಕ್ಕೆ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ತಿಳಿಸಿದೆ. ಅಮೆರಿಕದ ತನಿಖಾ ಸಂಸ್ಥೆ ಎಫ್‍ಬಿಐ ನಿರ್ದೇಶಕರಾಗಿದ್ದ ರಾಬರ್ಟ್ ಮ್ಯುಲರ್ ಅವರು ವಿಶೇಷ ವಕೀಲರಾಗಿ 22 ತಿಂಗಳ ಕಾಲ ಈ ಪ್ರಕರಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಅವರ ತನಿಖೆ ವೇಳೆ 3 ಕಂಪನಿಗಳು ಹಾಗೂ 34 ವ್ಯಕ್ತಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, 7 ಮಂದಿಯ ಅಪರಾಧ ಸಾಬೀತಾಗಿದ್ದು, ಶಿಕ್ಷೆಗೆ ಒಳಪಡಿಸಲಾಗಿದೆ.
ಈಗ ಮ್ಯುಲರ್ ಅವರ ಪರಿಪೂರ್ಣ ವರದಿ ಬಿಡುಗಡೆಯಾಗಿದ್ದ ಅಮೆರಿಕ ಅಧ್ಯಕ್ಷರ ನೆತ್ತಿ ಮೇಲೆ ತೂಗುಗತ್ತಿ ನೇತಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.