janadhvani

Kannada Online News Paper

ನ್ಯೂಝಿಲ್ಯಾಂಡ್‌ ಭಯೋತ್ಪಾದಕ ದಾಳಿ- ಸಂಭ್ರಮಿಸಿದಾತ ಯುಎಇಯಿಂದ ಗಡೀಪಾರು

ದುಬೈ, ಮಾ. 20: ಕಳೆದ ವಾರ ನ್ಯೂಝಿಲ್ಯಾಂಡ್‌ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡವನ್ನು ಸಂಭ್ರಮಿಸಿದ ಉದ್ಯೋಗಿಯೊಬ್ಬನನ್ನು ಕೆಲಸದಿಂದ ವಜಾಗೊಳಿಸಿ ಗಡಿಪಾರು ಮಾಡಲಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಕಂಪೆನಿಯೊಂದು ತಿಳಿಸಿದೆ.

ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿರುವ ಎರಡು ಮಸೀದಿಗಳಲ್ಲಿ ಕಳೆದ ಶುಕ್ರವಾರ ಗುಂಡಿನ ದಾಳಿ ನಡೆಸಿದ ಉಗ್ರನೊಬ್ಬ ಕನಿಷ್ಠ 50 ಮಂದಿಯನ್ನು ಹತ್ಯೆಮಾಡಿದ್ದ,ನ್ಯೂಝಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ಆಸ್ಟ್ರೇಲಿಯ ಪ್ರಜೆ 28 ವರ್ಷದ ಬ್ರೆಂಟನ್ ಟ್ಯಾರಂಟ್ ಹತ್ಯಾಕಾಂಡ ನಡೆಸಿದ್ದನು.

‘‘ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ನಡೆದ ದಾಳಿಗಳ ಬಗ್ಗೆ ಟ್ರಾನ್ಸ್‌ಗಾರ್ಡ್ ಕಂಪೆನಿಯ ಉದ್ಯೋಗಿಯೊಬ್ಬ ವಾರಾಂತ್ಯದಲ್ಲಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪ್ರಚೋದನಾತ್ಮಕ ಬರಹಗಳನ್ನು ಹಾಕಿಕೊಂಡು ಸಂಭ್ರಮಿಸಿರುವುದು ಗಮನಕ್ಕೆ ಬಂದಿದೆ’’ ಎಂದು ಮಂಗಳವಾರ ಹೊರಡಿಸಿದ ಹೇಳಿಕೆಯೊಂದರಲ್ಲಿ ಭದ್ರತಾ ಕಂಪೆನಿ (ಟ್ರಾನ್ಸ್‌ಗಾರ್ಡ್) ಹೇಳಿದೆ.

‘‘ಸಾಮಾಜಿಕ ಮಾಧ್ಯಮದ ಅನುಚಿತ ಬಳಕೆ ಬಗ್ಗೆ ನಾವು ಶೂನ್ಯ ಸಹನೆ ಹೊಂದಿದ್ದೇವೆ. ಹಾಗಾಗಿ, ಈ ವ್ಯಕ್ತಿಯನ್ನು ನಾವು ತಕ್ಷಣ ಕೆಲಸದಿಂದ ವಜಾಗೊಳಿಸಿದ್ದೇವೆ ಹಾಗೂ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇವೆ’’ ಎಂದು ಕಂಪೆನಿಯ ಆಡಳಿತ ನಿರ್ದೇಶಕ ಗ್ರೆಗ್ ವಾರ್ಡ್ ಹೇಳಿದರು.

ಆ ಉದ್ಯೋಗಿಯನ್ನು ಬಳಿಕ ಯುಎಇ ಸರಕಾರ ಗಡಿಪಾರು ಮಾಡಿದೆ ಎಂದು ಕಂಪೆನಿ ತಿಳಿಸಿದೆ.ವ್ಯಕ್ತಿಯ ಗುರುತು ಮತ್ತು ಅವನ ಸಾಮಾಜಿಕ ಮಾಧ್ಯಮ ಸಂದೇಶವನ್ನು ಬಹಿರಂಗಪಡಿಸಿಲ್ಲ.

error: Content is protected !! Not allowed copy content from janadhvani.com