ಪಣಜಿ: ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರೀಕರ್(63) ಭಾನುವಾರ ರಾತ್ರಿ ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್)ಯಲ್ಲಿ ನಿಧನರಾದರು
ಮನೋಹರ್ ಪರ್ರೀಕರ್ ಮೇದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್) ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಸ್‌ನಲ್ಲಿ ಉಂಟಾದ ತೊಂದರೆಗೆ ಅಮೆರಿಕ ಹಾಗೂ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದರು.
2018ರ ಫೆ,14ರಂದು ಅನಾರೋಗ್ಯದಿಂದಾಗಿ ಜಿಎಂಸಿಎಚ್‌ಗೆ ದಾಖಲಾಗಿದ್ದರು. ಅಲ್ಲಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. 2018ರ ಮಾರ್ಚ್ 3ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಅವರು, ಜೂನ್ 14ರಂದು ಹಿಂದಿರುಗಿದ್ದರು. ಮತ್ತೆ ಆಗಸ್ಟ್ 10ರಂದು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದರು. ಆಗಸ್ಟ್ 22ರಂದು ಗೋವಾಗೆ ವಾಪಸ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.
ಸೆಪ್ಟೆಂಬರ್ 15ರಂದು ದೆಹಲಿಯ ಏಮ್ಸ್‌ನಲ್ಲಿ ಸುಮಾರು 1 ತಿಂಗಳು ಚಿಕಿತ್ಸೆ ಪಡೆದಿದ್ದರು. 2018ರ ಅಕ್ಟೋಬರ್ 14ರಂದು ಗೋವಾಗೆ ಮರಳಿ ಖಾಸಗಿ ನಿವಾಸದಿಂದಲೇ ರಾಜ್ಯದ ಆಡಳಿತ ನಡೆಸಿದ್ದರು. 2019ರ ಜನವರಿ 2ರಂದು ಮುಖ್ಯಮಂತ್ರಿ ಕಚೇರಿಗೆ ಹಾಜರಾಗುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು. ಜ.29ರಂದು ಬಜೆಟ್ ಅಧಿವೇಶದಲ್ಲಿ ಭಾಗಿಯಾಗಿ, ಜ.30ರಂದು ರಾಜ್ಯ ಬಜೆಟ್ ಮಂಡಿಸಿದ್ದರು.
ಬಿಜೆಪಿ ಪಾಳೆಯದಲ್ಲಿ ಬುದ್ದಿವಂತ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದರು. 1955 ಡಿಸೆಂಬರ್ 13ರಂದು ಉತ್ತರ ಗೋವಾದ ಮಾಪುಸಾದಲ್ಲಿ ಜನಿಸಿದರು. ಮಡ್‌ಗಾಂವ್‌ನ ಯೊಯೊಲಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದು ಉನ್ನತ ವ್ಯಾಸಂಗಕ್ಕೆ ಮುಂಬೈಗೆ ತೆರಳಿದರು. 1978ರಲ್ಲಿ ಬಾಂಬೆ ಐಐಟಿಯಿಂದ ಮೆಟಾಲರ್ಜಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.
ಶಾಲಾ ದಿನಗಳಲ್ಲೇ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿದ್ದರು. 26ನೇ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನ ಸಂಘಚಾಲಕನಾಗಿ ಆಯ್ಕೆಯಾಗಿದ್ದರು. ನಂತರ ರಾಮಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾಗಿದ್ದರು.
1994ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಗೋವಾ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದರು. 2000ನೇ ಫೆಬ್ರುವರಿ 24ರಂದು ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ನಂತರ 2002, 2012ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದರು.