ಪಣಜಿ: ಬಿಜೆಪಿ ಶಾಸಕರೊಬ್ಬರ ಸಾವಿನಿಂದ ಬಹುಮತ ಕುಸಿದಿರುವ ಗೋವಾ ಸರ್ಕಾರವನ್ನು ವಜಾಗೊಳಿಸಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಹಕ್ಕು ಮಂಡಿಸಿ ಕಾಂಗ್ರೆಸ್ ನಾಯಕ ಚಂದ್ರಕಾಂತ್ ಕಾವ್ಳೇಕರ್ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದಾರೆ.
ಕಾವ್ಳೇಕರ್ ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಅವರಿಗೆ ಬರೆದಿರುವ ಪತ್ರದಲ್ಲಿ, “ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜ ಸಾವಿನ ನಂತರ ರಾಜ್ಯದ ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ, ಅಲ್ಲದೆ, ಗೋವಾ ಜನತೆ ಈ ಸರ್ಕಾರದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಬಿಜೆಪಿಯ ಸಂಖ್ಯೆಯು ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ. ಹೀಗಾಗಿ ಅಲ್ಪಮತ ಸರ್ಕಾರವನ್ನು ಒಂದು ಕ್ಷಣವೂ ಮುಂದುವರಿಯಲು ಅವಕಾಶ ನೀಡಬಾರದು,” ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಬಹುಮತಕಳೆದುಕೊಂಡಿರುವ ಬಿಜೆಪಿ ನೇತೃತ್ವವನ್ನು ವಜಾಗೊಳಿಸಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ಗೋವಾದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಯತ್ನಿಸಿದರೇ ಅದು ಕಾನೂನು ಬಾಹಿರವಾಗುತ್ತದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ನಿಧನರಾದ ಬಿಜೆಪಿ ಸಚಿವ ಫ್ರಾನ್ಸಿಸ್ ಡಿಸೋಜ ಮತ್ತು ಕಾಂಗ್ರೆಸ್ ಇಬ್ಬರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಗೋವಾ ವಿಧಾನಸಭೆ ಸಂಖ್ಯಾಬಲ 40 ರಿಂದ 37ಕ್ಕೆ ಕುಸಿದಿದೆ.
ಸುಭಾಶ್ ಶಿರೋದ್ಕರ್ ಮತ್ತು ದಯಾನಂದ ಸೋಪ್ಟೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಪ್ರಸ್ತುತ 16ರಿಂದ 14ಕ್ಕೆ ಇಳಿದಿದೆ.
13 ಸ್ಥಾನ ಗೆದ್ದಿದ್ದ ಬಿಜೆಪಿ, ಮೂವರು ಗೋವಾ ಫಾರ್ವರ್ಡ್ ಪಾರ್ಟಿ, ಎಂಜಿಪಿ ಮತ್ತು ಸ್ವತಂತ್ರ ಅಭ್ಯರ್ಥಿ ಮತ್ತು ಎನ್ಸಿಪಿಯ ಒಬ್ಬ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು.