ದುಬೈ: ಪಾಕಿಸ್ತಾನಕ್ಕೆ ತೆರಳುವ ತನ್ನ ವಿಮಾನ ಹಾರಟವನ್ನು ಗಲ್ಫ್ ರಾಷ್ರಗಳು ನಿಲ್ಲಿಸಿವೆ. ಪಾಕಿಸ್ತಾನವು ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ವೈಮಾನಿಕ ಹಾದಿಯನ್ನು ಬಂದ್ ಮಾಡಿರುವುದಾಗಿ ಘೋಷಿಸಿದ ಹಿನ್ನಲೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಯುಎಇ ಸಿವಿಲ್ ಏವಿಯೇಷನ್ ಅಥಾರಿಟಿಯು ಪಾಕಿಸ್ತಾನಕ್ಕೆ ಎಲ್ಲಾ ಸೇವೆಗಳನ್ನು ಮುಂದಿನ ಆದೇಶ ಹೊರಡಿಸುವ ತನಕ ನಿಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ರಾಷ್ಟ್ರೀಯ ವಿಮಾನಗಳ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸೌದಿ ಏರ್ ಲೈನ್ಸ್ ಕಂಪೆನಿಯು ಪಾಕಿಸ್ತಾನಕ್ಕೆ ತೆರಳುವ ತನ್ನ ಎಲ್ಲಾ ವೈಮಾನಿಕ ಸೇವೆಗಳನ್ನು ರದ್ದುಗೊಳಿಸಿದ್ದು, ಪಾಕಿಸ್ತಾನವು ದೇಶೀಯ ಮತ್ತು ಅಂತರರಾಷ್ಟ್ರೀಯ ವೈಮಾನಿಕ ಹಾದಿಯನ್ನು ಬಂದ್ ಮಾಡಿರುವುದಾಗಿ ಘೋಷಿಷಿದ ಕಾರಣದಿಂದಾಗಿ ಈ ಕ್ರಮ ಕೈಗೊಂಡಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಎದ್ದಿರುವ ಸಂಘರ್ಷ ಸಮಸ್ಯೆಯನ್ನು ಮನಗಂಡು ಪಾಕಿಸ್ಥಾನ ಈ ಕ್ರಮಕೈಗೊಂಡಿದೆ ಎನ್ನಲಾಗಿದ್ದು, ಸೇವೆಗಳನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕುವೈತ್ ಏರ್‌ವೇಸ್ ನ ಲಾಹೋರ್ ಮತ್ತು ಇಸ್ಲಾಮಾಬಾದ್ ಸೇವೆಗಳನ್ನು ಕೂಡ ಮತ್ತೊಂದು ಪ್ರಕಟಣೆ ಹೊರಡಿಸುವ ತನಕ ನಿಲ್ಲಿಸಿರುವುದಾಗಿ ಕುವೈತ್ ಅಧಿಕಾರಿಗಳು ತನ್ನ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಖತಾರ್ ಏರ್‌ವೇಸ್ ಕೂಡಾ ಮುಂದಿನ ಆದೇಶ ಪ್ರಕಟಿಸುವ ತನಕ ತನ್ನ ಪಾಕಿಸ್ತಾನ ಸೇವೆಯನ್ನು ರದ್ದು ಪಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.