ಬೆಂಗಳೂರು: ಮಂಗಳೂರು– ಬೆಂಗಳೂರು, ಬೆಂಗಳೂರು– ಹೈದರಾಬಾದ್, ಬೆಂಗಳೂರು – ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ವಂದೇ ಭಾರತ್ (ಟ್ರೈನ್ –18) ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದ ಅತ್ಯಾಧುನಿಕ ರೈಲು. ಹೀಗಾಗಿ ಇದನ್ನು ಪ್ರಮುಖ ನಗರಗಳ ನಡುವೆ ಸಂಪರ್ಕ ಕೊಂಡಿಯಾಗಿ ಬೆಸೆಯಲಿದ್ದೇವೆ. ಈ ಮಾರ್ಗದುದ್ದಕ್ಕೂ ಜಾಗತಿಕ ಗುಣಮಟ್ಟದ ಸ್ವದೇಶಿ ನಿರ್ಮಿತ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆಯೂ ಇರಲಿದೆ ಎಂದರು.
ಸದ್ಯ ದೆಹಲಿ ಮತ್ತು ವಾರಾಣಸಿ ಮಧ್ಯೆ ಓಡುತ್ತಿರುವ ಈ ರೈಲನ್ನು ದೇಶದಾದ್ಯಂತ ವಿಸ್ತರಿಸುವ ಯೋಜನೆಯೂ ಇದೆ. ಗಂಟೆಗೆ 180ರಿಂದ 200 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಈ ರೈಲಿನದ್ದು. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಆರಾಮದಾಯಕ ಸೌಲಭ್ಯಗಳು ಸ್ವಯಂ ಚಾಲಿತ ವಾತಾನುಕೂಲ, ಸಂವಹನ ವ್ಯವಸ್ಥೆಯಿದೆ. ಫೆ. 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲನ್ನು ಉದ್ಘಾಟಿಸಿದ್ದರು.
ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಪರ್ಯಾಯವಾಗಿ ಈ ರೈಲುಗಳನ್ನು ಓಡಿಸುವ ಚಿಂತನೆಯೂ ಇದೆ. ಅದಕ್ಕೆ ತಕ್ಕಂತೆ ಹಳಿಗಳ ಸಾಮರ್ಥ್ಯ, ಸುರಕ್ಷತಾ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಬೇಕು. ಮಾರ್ಗ ಸಂಪೂರ್ಣ ವಿದ್ಯುದೀಕರಣಗೊಳ್ಳಬೇಕು. ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಈ ಯೋಜನೆ ಕಾರ್ಯಗತವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.