ಢಾಕಾ: ಪುಲ್ವಾಮಾ ದಾಳಿಯ ಬಳಿಕ ಭಾರತ ವಿಮಾನ ಹೈಜಾಕ್ ಮಾಡಲಾಗುವುದು ಎನ್ನುವ ಬೆದರಿಕೆ ಬಂದ ಬೆನ್ನಲ್ಲೇ ಬಾಂಗ್ಲಾದೇಶದ ದುಬೈ ಮೂಲದ ವಿಮಾನವನ್ನು ಅಪಹರಿಸುವ ಪ್ರಯತ್ನ ನಡೆದಿದೆ.
ಹೈಜಾಕ್ ಮಾಡಲು ಯತ್ನಿಸಿದ ಪರಿಣಾಮ ಬಾಂಗ್ಲಾದೇಶದ ಚಿತ್ತಗಾಂಗ್ ಶಾ ಅಮಾನತ್ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ದುಬೈಗೆ ಪ್ರಯಾಣ ಬೆಳೆಸಿದ್ದ ವಿಮಾನ ಇದಾಗಿದೆ ಎಂಬ ಮಾಹಿತಿ ಲಭಿಸಿದೆ.
145 ಮಂದಿ ಪ್ರಯಾಣಿಕರಿದ್ದ ಬಿಜಿ 147 ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಲಾಗಿದ್ದು, ಈ ವೇಳೆ ವಿಮಾನದ ಸಿಬ್ಬಂದಿಯೊಬ್ಬರನ್ನ ಶೂಟ್ ಮಾಡಲಾಗಿದೆ. ಆದರೆ ಸದ್ಯ ಘಟನೆಯಲ್ಲಿ ಪ್ರಯಾಣಿಕರನ್ನು ರಕ್ಷಣೆ ಮಾಡಿ, ಓರ್ವ ಅಪಹರಣಕಾರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ವಿಮಾನದ ಕ್ಯಾಬಿನ್ ಸಿಬ್ಬಂದಿ ಕೆಲ ವ್ಯಕ್ತಿಗಳ ವರ್ತನೆ ಬಗ್ಗೆ ಅನುಮಾನ ಬಂದ ಕೂಡಲೇ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ಢಾಕಾದಿಂದ ಚಿತ್ತಗಾಂಗ್ ಮೂಲಕ ವಿಮಾನ ದುಬೈಗೆ ಪ್ರಯಾಣ ಬೆಳೆದಿದ್ದು, ಈ ವೇಳೆ ಹೈಜಾಕ್ ಮಾಡಿದ ವಿಚಾರ ತಿಳಿದ ಕೂಡಲೇ ಸಂಜೆ 5.15ರ ವೇಳೆಗೆ ತುರ್ತು ಲ್ಯಾಡಿಂಗ್ ಮಾಡಲಾಗಿದೆ. ತಕ್ಷಣವೇ ಪೊಲೀಸ್ ಅಧಿಕಾರಿಗಳು ಹಾಗೂ ರ್ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ ಕಾರ್ಯಾಚರಣೆ ಆರಂಭಿಸಿ, ಇಡೀ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿದೆ.
ಭಾರತದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರಿಂದ ವಿಮಾನ ಹೈಜಾಕ್ ಮಾಡುವ ಫೋನ್ ಬೆದರಿಕೆ ಆಗಮಿಸಿದ ಬೆನ್ನಲ್ಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ರವಾನೆ ಮಾಡಿ ಭದ್ರತೆ ನೀಡಲಾಗಿತ್ತು. ವಿಚಾರಣೆಯ ಬಳಿಕ ಫೋನ್ ಕರೆ ಸುಳ್ಳು ಎಂದು ತಿಳಿದು ಬಂದಿತ್ತು. ಆದರೆ ಇಂತಹ ಸಮಯದಲ್ಲಿ ಅವಕಾಶವನ್ನು ತೆಗೆದುಕೊಳ್ಳಲು ಬಯಸದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆದ(ಸಿಐಎಸ್‍ಎಫ್) ಎಲ್ಲಾ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಿತ್ತು.