ಜಿದ್ದಾ.ಫೆ,9: ವಿದೇಶಿಯರು ರಹಸ್ಯವಾಗಿ ಅಥವಾ ಕಾನೂನು ವಿರುದ್ದವಾಗಿ ಮೂಲ ನಿವಾಸಿಗಳ ಹೆಸರಿನ ಮರೆಯಲ್ಲಿ ಮಾಡುವ ವ್ಯಾಪಾರಕ್ಕೆ ಬೇನಾಮಿ ಎನ್ನಲಾಗುತ್ತದೆ.
ಸೌದಿ ಅರೇಬಿಯಾದಲ್ಲಿ ಇಂತಹ ಬೇನಾಮಿ ವ್ಯವಹಾರಗಳು ಕಾನೂನು ವಿರುದ್ದವಾಗಿದೆ. ಸ್ಥಳೀಯ ಜನರಿಗೆ ಮಾತ್ರ ವ್ಯಾಪಾರ ನಡೆಸಲು ಕಾನೂನುಬದ್ಧ ಹಕ್ಕಿದೆ. ಅದೇ ಸಮಯದಲ್ಲಿ ವಿದೇಶಿ ಹೂಡಿಕೆದಾರರಿಗೆ ವಿವಿಧ ಯೋಜನೆಗಳಲ್ಲಿ ಇಸ್ತಿಸ್ಮಾರ್ ಎಂಬ ಹೆಸರಿನಲ್ಲಿ ವ್ಯಾಪಾರ ನಡೆಸಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ, ಸ್ಥಳೀಯರ ಮರೆಯಲ್ಲಿ ವಿದೇಶಿ ನಾಗರಿಕರು ವ್ಯಾಪಾರ ನಡೆಸುತ್ತಿರುವುದಾಗಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಅಂತಹ ಬೇನಾಮಿಗಳನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳುವ ತಯಾರಿಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ಈ ಪ್ರಕ್ರಿಯೆಯು ಮುಂದಿನ ವಾರ ಪ್ರಾರಂಭವಾಗಲಿದೆ. ವಿವಿಧ ವಿಭಾಗಗಳ ಸಹಕಾರದೊಂದಿಗೆ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಯಲಿದೆ ಎಂದು ಸಚಿವ ಮಜೀದ್ ಅಲ್ ಖಸಬಿ ಹೇಳಿದರು.
ದೇಶೀಯ ನೆಲೆಯಲ್ಲಿ ಸೌದಿ ವಾಣಿಜ್ಯ ಹೂಡಿಕೆ ಸಚಿವಾಲಯ ಈ ಕಾರ್ಯಾಚರಣೆ ನಡೆಸಲಿದೆ ಎಂದು ಸಚಿವರು ಹೆಳಿದ್ದಾರೆ. ಮುಂದಿನ ಬುಧವಾರದಿಂದ ಕ್ರಮ ಪ್ರಾರಂಭವಾಗಲಿದೆ.