ದುಬೈ: ದುಬೈ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರವು ಮಸ್ಕತ್‌ಗೆ ತೆರಳುವ ತನ್ನ ಬಸ್ ಸೇವೆಯನ್ನು ವಿಸ್ತರಿಸಿದೆ. ಹೊಸ ಸೇವೆಗಳನ್ನು ಒಮಾನ್ ಮೂಲದ ನ್ಯಾಷನಲ್ ಟ್ರಾನ್ಸ್ಪೋರ್ಟ್ ಕಂಪೆನಿಯಾದ ಮುವಾಸಲಾತ್‌ನ ಸಹಕಾರದೊಂದಿಗೆ ಪ್ರಾರಂಭಿಸಲಾಗಿದೆ.
ಟಿಕೆಟ್ ದರವು 55 ದಿರ್ಹಂ ಆಗಿದ್ದು, ಮರುಪ್ರಯಾಣ ಬಯಸುವವರು 90 ದಿರ್ಹಂ ಪಾವತಿಸಬೇಕು. ಬೆಳಗ್ಗೆ 7:30, ಅಪರಾಹ್ನ 3:30 ಮತ್ತು ರಾತ್ರಿ 11 ಗಂಟೆಗೆ ಸರ್ವೀಸ್ ಇರಲಿದೆ.
ಪ್ರವಾಸಿಗರು ದುಬೈನ ಮೂರು ನಿಲ್ದಾಣಗಳಿಂದ ಪ್ರಯಾಣ ಬೆಳಸಲು ಸಾಧ್ಯವಿದ್ದು, ಅಬು ಹೈಲ್ ಮೆಟ್ರೋ ಸ್ಟೇಶನ್, ದುಬೈ ಏರ್ಪೋರ್ಟ್ ಟರ್ಮಿನಲ್ -2 ಮತ್ತು ರಶೀದಿಯಾ ಮೆಟ್ರೊ ನಿಲ್ದಾಣದಿಂದ ಹೊರಡಬಹುದಾಗಿದೆ.
ಒಮಾನ್ ನಲ್ಲಿ ಹನ್ನೊಂದು ಸ್ಥಳಗಳಲ್ಲಿ ಬಸ್ ನಿಲ್ದಾಣಗಳಿದ್ದು, ಶಿನಾಸ್, ಸೊಹಾರ್, ಬಾರ್ಕ, ಮಸ್ಕತ್ ವಿಮಾನ ನಿಲ್ದಾಣ ಮತ್ತು ಅತಬಾ ಪ್ರಧಾನ ಬಸ್ ನಿಲ್ದಾಣಗಳಾಗಿವೆ.
ವೈಫೈ ಸೌಲಭ್ಯದೊಂದಿದಿಗೆ 50 ಪ್ರಯಾಣಿಕರು ಸಂಚರಿಸಬಹುದಾದ ಬಸ್‌ನಲ್ಲಿ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ.
ಕೌಂಟರ್ಗಳಿಂದ ಟಿಕೆಟ್ ಖರೀದಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಆನ್ ಲೈನ್ ನಲ್ಲಿ ಮತ್ತು ನೋರ್ಕಾ ಕಾರ್ಡ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈ ಮತ್ತು ಮಸ್ಕತ್ ಬಸ್ ಪ್ರಯಾಣ ಹಿಂದೆಯೇ ಚಲಾವಣೆಯಲ್ಲಿದ್ದರೂ, ಇದೀಗ ಸುಧಾರಿತ ಸೇವೆಗಳು ಮತ್ತು ಹೆಚ್ಚಿನ ನಿಲ್ದಾಣಗಳ ಮೂಲಕ ಸೇವೆಯನ್ನು ವಿಸ್ತರಿಸಲಾಗಿದೆ.