janadhvani

Kannada Online News Paper

ಚುನಾವಣೆಗೆ ಮುನ್ನ ಭಾರತದಲ್ಲಿ ಕೋಮು ಗಲಭೆ-ಅಮೆರಿಕ ಗುಪ್ತಚರ ಇಲಾಖೆ

ವಾಷಿಂಗ್ಟನ್‌:  2019ರಲ್ಲಿ ಜಗತ್ತಿನಾದ್ಯಂತ ಉಂಟಾಗಬಹುದಾದ ಅಪಾಯ ಸಂದರ್ಭಗಳ ಪರಿಶೀಲನೆ ಕೈಗೊಂಡಿರುವ ಅಮೆರಿಕದ ಗುಪ್ತಚರ ಇಲಾಖೆಯು, ಭಾರತದ ಮುಂಬರುವ ಚುನಾವಣೆಯಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಹೇರಳವಾಗಿರುವ ಕುರಿತು ಲಿಖಿತ ವರದಿಯನ್ನು ಅಮೆರಿಕ ಗುಪ್ತಚರ ಇಲಾಖೆ ನಿರ್ದೇಶ ಡ್ಯಾನ್‌ ಕೋಟ್ಸ್‌ ಗುಪ್ತಚರ ಸಮಿತಿಗೆ(ಸೆನೆಟ್ ಸೆಲೆಕ್ಟ್‌ ಕಮಿಟಿ ಆನ್‌ ಇಂಟೆಲಿಜೆನ್ಸ್‌) ಸಲ್ಲಿಸಿದ್ದಾರೆ.

’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಿಂದೂ ರಾಷ್ಟ್ರೀಯತೆಗೆ ಒತ್ತು ನೀಡಿದರೆ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆಗೆ ಕಾರಣವಾಗಲಿದೆ’ ಎಂದು ಕೋಟ್ಸ್‌ ಗುಪ್ತಚರ ಸಮಿತಿಯ ಸದಸ್ಯರಿಗೆ ತಿಳಿಸಿದ್ದಾರೆ. 

ಭಾರತ ಪ್ರವಾಸದಿಂದ ಇತ್ತೀಚೆಗಷ್ಟೆ ಹಿಂದಿರುಗಿರುವ ಸಿಐಎ ನಿರ್ದೇಶಕ ಗಿನಾ ಹಾಸ್ಪೆಲ್‌, ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್‌ ವ್ರೇ ಹಾಗೂ ರಕ್ಷಣಾ ಗುಪ್ತಚರ ಸಂಸ್ಥೆ ನಿರ್ದೇಶಕ ರಾಬರ್ಟ್‌ ಆಶ್ಲೆ ಸೇರಿದಂತೆ ಗುಪ್ತಚರ ಸಮಿತಿಯ ಹಲವು ಪ್ರಮುಖರು ಜಗತ್ತಿನಾದ್ಯಂತ ಉಂಟಾಗಬಹುದಾದ ಅಪಾಯದ ಸಂದರ್ಭಗಳ ಪರಿಶೀಲನಾ ವರದಿ ಪ್ರಸ್ತುತ ಪಡಿಸುವ ಸಭೆಯಲ್ಲಿ ಭಾಗಿಯಾಗಿದ್ದರು. 

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೊದಲ ಅವಧಿಯಲ್ಲಿ ರೂಪಿಸಿರುವ ನಿಯಮಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೋಮುಗಳ ನಡುವೆ ತಲ್ಲಣ ಉಂಟು ಮಾಡಿವೆ. ಹಿಂದುತ್ವ ಬಿಂಬಿಸುವ ನಾಯಕರು ಹಿಂದೂ ರಾಷ್ಟ್ರೀಯತೆ ಪ್ರಚಾರದಲ್ಲಿ ತೊಡಗಿದರೆ ಬೆಂಬಲಿಗರು ಗಲಭೆ ಸೃಷ್ಟಿಸುವ ಸಂಭವವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ’ಕೋಮು ಗಲಭೆ ಹೆಚ್ಚಿದರೆ ಭಾರತೀಯ ಮುಸ್ಲಿಮರಲ್ಲಿ ಪರಕೀಯ ಭಾವ ಮೂಡಿಸಲಿದೆ ಹಾಗೂ ಇಸ್ಲಾಮಿಕ್‌ ಉಗ್ರ ಸಂಘಟನೆಗಳು ಭಾರತದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕೋಟ್ಸ್‌ ಎಚ್ಚರಿಸಿದ್ದಾರೆ. 

2019ರ ಮೇನಲ್ಲಿ ಪ್ರಧಾನಿ ಮೋದಿ ಅವರ ಐದು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳ್ಳಲಿದ್ದು, ಮೇ ಅಂತ್ಯದೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ಹೊಸ ಸರ್ಕಾರ ರಚನೆಯಾಗಬೇಕಿದೆ. ಭಾರತ–ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ಬಗ್ಗೆಯೂ ಕೋಟ್ಸ್‌ ಪ್ರಸ್ತಾಪಿಸಿದ್ದಾರೆ. 

error: Content is protected !! Not allowed copy content from janadhvani.com