ನವದೆಹಲಿ: ಅಯೋಧ್ಯೆಯ ರಾಮಜನ್ಮ ಭೂಮಿ–ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ನಡೆಸಲು ಐವರು ನ್ಯಾಯಮೂರ್ತಿಗಳಿರುವ ಹೊಸದೊಂದು ಸಾಂವಿಧಾನಿಕ ಪೀಠವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪುನರ್ ರಚಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನೂತನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬಾಬ್ಡೆ, ಡಿ.ವೈ ಚಂದ್ರಾಚೂಡ್, ಅಶೋಕ್ ಭೂಷಣ್, ಎಸ್.ಎ. ನಾಜೀರ್ ಇದ್ದಾರೆ.
ನ್ಯಾಯಮೂರ್ತಿ ಯು.ಯು.ಲಲಿತ್ ಅವರು ವಿಚಾರಣಾ ಪೀಠದಿಂದ ಹಿಂದೆ ಸರಿದ ಬಳಿಕ ಹೊಸ ಪೀಠವನ್ನು ರಚಿಸಲಾಗಿದೆ. ಜನವರಿ 10 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್.ವಿ.ರಮಣ ಅವರೂ ಹೊಸ ಪೀಠದಲ್ಲಿಲ್ಲ.
ಈ ಸಂಬಂಧ ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಿರುವ ಸುಪ್ರಿಂ ಕೋರ್ಟ್ ರಿಜಿಸ್ಟ್ರಾರ್, ‘ವಿವಾದಿತ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಸಾಂವಿಧಾನಿಕ ಪೀಠದೆದುರು ಎತ್ತಿಕೊಳ್ಳುವ ಮುನ್ನ, ಜ.29 ರಂದು(ಗುರುವಾರ) ಮುಖ್ಯ ನ್ಯಾಯಮೂರ್ತಿಗಳ ಅಂಗಳಲ್ಲಿ ವಿಚಾರಣೆಗೊಳಪಡಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.