janadhvani

Kannada Online News Paper

ಕಾಂಗ್ರೆಸ್ ಜಯಭೇರಿ ಬಾರಿಸಿದ್ದ 3 ರಾಜ್ಯಗಳಲ್ಲಿ ಇಂದು ಸಿಎಂ ಪ್ರಮಾಣವಚನ

ನವದೆಹಲಿ (ಡಿ. 17): ಪಂಚರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಒಂದು ವಾರ ಕಳೆದಿದೆ. 5 ರಾಜ್ಯಗಳಲ್ಲಿ 3 ಕಡೆ ಜಯಭೇರಿ ಬಾರಿಸಿದ್ದ ಕಾಂಗ್ರೆಸ್​ಗೆ ಇಂದು ವಿಶೇಷವಾದ ದಿನ. ಒಂದರ ನಂತರ ಒಂದು ರಾಜ್ಯಗಳಲ್ಲಿ ಇಂದು ಕಾಂಗ್ರೆಸ್​ ಪಕ್ಷದ ಸಿಎಂ ಅಭ್ಯರ್ಥಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದೇಶದ 3 ಪ್ರಮುಖ ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಕಾಂಗ್ರೆಸ್​ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡಿತ್ತು. ಆ ಸಂಭ್ರಮದಲ್ಲಿ ತೇಲುತ್ತಿರುವ ಕಾಂಗ್ರೆಸ್​ ನಾಯಕರಿಗೆ ಇಂದು ಮತ್ತೊಂದು ಸಂಭ್ರಮ. ಒಂದೇ ದಿನ ಮೂರು ರಾಜ್ಯಗಳಲ್ಲಿ ಇಂದು ಕಾಂಗ್ರೆಸ್​ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದೆ.

ರಾಜಸ್ಥಾನದಿಂದ ಆರಂಭ:
ಇಂದು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಗದ್ದುಗೆಗೆ ಏರಲಿದೆ. ಬೆಳಗ್ಗೆ 10 ಗಂಟೆಗೆ ರಾಜಸ್ಥಾನದಿಂದ ಪ್ರಮಾಣವಚನ ಸ್ವೀಕಾರ ಸಮಾರಂಭ ಆರಂಭವಾಗಲಿದ್ದು, ಬಳಿಕ ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಮೂರೂ ರಾಜ್ಯಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಬೆಳಗ್ಗೆ 10 ಗಂಟೆಗೆ ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಹಾಗೂ ಸಚಿನ್​ ಪೈಲಟ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೈಪುರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ದೇಶದ ಪ್ರಮುಖ ಬಿಜೆಪಿಯೇತರ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ದೇವೇಗೌಡ, ಸಿಎಂ ಹೆಚ್​.ಡಿ. ಕುಮಾರಸ್ವಾಮಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲ, ಬಿಹಾರದ ವಿರೋಧಪಕ್ಷದ ನಾಯಕ ತೇಜಸ್ವಿ ಯಾದವ್​ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗೇ, ದೆಹಲಿಯ ಅರವಿಂದ್​ ಕೇಜ್ರಿವಾಲ್​ ಆಮ್​ ಆದ್ಮಿ ಪಕ್ಷದ ಸಂಜಯ್​ ಸಿಂಗ್​ ಕೂಡ ಆಗಮಿಸುವ ಸಾಧ್ಯತೆಯಿದೆ.

ಮಧ್ಯಾಹ್ನ 1 ಗಂಟೆಯ ವೇಳೆಗೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ಕಮಲನಾಥ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಛತ್ತೀಸ್​ಗಢದ ರಾಯ್ಪುರದಲ್ಲಿ ಭೂಪೇಶ್​ ಬಾಘೆಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮಧ್ಯಪ್ರದೇಶದ ಭೂಪಾಲ್​ನ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಶಾಸಕ ದಿನೇಶ್​ ತ್ರಿವೇದಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಅವರ ಪ್ರತಿನಿಧಿಯಾಗಿ ದಿನೇಶ್​ ತ್ರಿವೇದಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಬಹುಮತ ಪಡೆಯಲು ಬೆಂಬಲ ನೀಡಿದ್ದ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರ ಅನುಪಸ್ಥಿತಿಗೆ ಕಾರಣವೇನೆಂದು ತಿಳಿದುಬಂದಿಲ್ಲ. 

error: Content is protected !! Not allowed copy content from janadhvani.com