janadhvani

Kannada Online News Paper

ಒಂದು ಸಮುದಾಯದ ಆಚಾರ – ವಿಚಾರ ಸಂಸ್ಕೃತಿಯನ್ನು ವ್ಯಕ್ತಪಡಿಸುವುದೇ ಧರ್ಮ. ಪ್ರಜಾಪ್ರಭುತ್ವದ ಆಳ್ವಿಕೆಯೇ ರಾಜಕೀಯ. ಧರ್ಮ ಮತ್ತು ರಾಜಕೀಯ ಬೇರೆ ಬೇರೆ ಗುರಿ , ಆದರ್ಶಗಳನ್ನು ಹೊಂದಿರುವಂತದ್ದು. ಆದರೆ ಇಂದಿನ ದಿನಗಳಲ್ಲಿ ಇವೆರಡಕ್ಕೂ ಸಂಭಂಧವನ್ನು ಕಲ್ಪಿಸುವ ಕಾರ್ಯ ಬಹಳ ಯತೇಚ್ಚವಾಗಿ ನಡೆಯುತ್ತಿದೆ. ಜನರ ಮನಸ್ಸಿನಲ್ಲಿ ಧರ್ಮಾಧಾರಿತ ರಾಜಕೀಯ ನಡೆಸುವ ಹುನ್ನಾರ ನಡೆಯುತ್ತಿದೆ.

ಧರ್ಮದಲ್ಲಿ ಯಾವತ್ತೂ ರಾಜಕೀಯ ಇಲ್ಲ. ಆದರೆ ರಾಜಕೀಯದಲ್ಲಿ ಎಲ್ಲಾ ಧರ್ಮದ, ಜಾತಿಯ ವ್ಯಕ್ತಿಗಳು ಕೂಡಿರುತ್ತಾರೆ.
ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ಕೆಲವೊಂದು ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಇಳಿಯುತ್ತಾರೆ. ಅದರಲ್ಲೂ ಬಹಳ ವಿಶೇಷವೇನೆಂದರೆ ಕೆಲವೊಂದು ಅಮಾಯಕರ ಕೊಲೆಯ ವಿಚಾರವನ್ನು ಮಂದಿಟ್ಟುಕೊಂಡು ಪ್ರಚಾರ ನಡೆಸುವುದು. ಬುದ್ದಿವಂತರ ಜಿಲ್ಲೆ ಎಂದು ಕರೆಯುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದರ ಪ್ರಭಾವ ಅಧಿಕವಾಗಿರುತ್ತದೆ.

ರಾಜಕೀಯ ಎಂಬುದು ಒಂದು ಚದುರಂಗದ ಆಟವಿದ್ದಂತೆ. ಇಂದು ಒಂದು ಪಕ್ಷದಲ್ಲಿದ್ದವರು ನಾಳೆ ಇನ್ನೊಂದು ಪಕ್ಷಕ್ಕೆ ಹಾರುತ್ತಾರೆ. ಇಂದು ಮಂತ್ರಿಯಾಗಿ ಅಧಿಕಾರ ನಡೆಸಿದವರು ನಾಳೆ ಏನೂ ಅಧಿಕಾರ ಇಲ್ಲದೆ ಮೌನಪಾಲಿಸುತ್ತಾರೆ.
ಇದೆಲ್ಲಾ ಪ್ರಸಕ್ತ ರಾಜಕೀಯದಲ್ಲಿ ಸರ್ವೇ ಸಾಮಾನ್ಯವಾದದ್ದು.
ಆದರೆ ಮುಗ್ದ ಅಮಾಯಕ ಜನರು ಇದನ್ನೆಲ್ಲಾ ಗಮನಿಸದೆ, ಕೆಲವರು ಗಮನಿಸಿಯೂ, ರಾಜಕೀಯ ನಾಯಕರು ನೀಡುವ ಧರ್ಮ ರಕ್ಷಣೆಯ ಟೊಳ್ಳು ಭರವಸೆಗಳಿಗೆ ಬಲಿಯಾಗುತ್ತಾರೆ.

ಧರ್ಮದ ರಕ್ಷಣೆ ಎಂದರೆ ಇನ್ನೊಂದು ಧರ್ಮದ ಸಂಸ್ಕ್ರತಿ ,ಆಚರಣೆಯನ್ನು ಹಿಯಾಳಿಸುವುದೋ ಅಥವಾ ಒಂದು ಧರ್ಮದ ವ್ಯಕ್ತಿಯನ್ನು ಹತ್ಯೆಮಾಡುವುದೋ ಅಲ್ಲ. ಬದಲಾಗಿ ಧರ್ಮ ರಕ್ಷಣೆ ಎಂದರೆ
ತಮ್ಮ ತಮ್ಮ ಧರ್ಮದ ಸಂಸ್ಕ್ರತಿಯನ್ನು ಆಚರಿಸುವುದರ ಜೊತೆಗೆ ಇನ್ನೊಂದು ಧರ್ಮದ ಬಗ್ಗೆ ಗೌರವ ತೋರಿಸುವುದಾಗಿದೆ.
ಪ್ರತಿಯೊಂದು ಧರ್ಮದ ಜನರು ಎಷ್ಟೋ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂತಹ ಜನರನ್ನು ಸಂಪರ್ಕಿಸಿ ಸೂಕ್ತವಾದ ಪರಿಹಾರವನ್ನು ಒದಗಿಸುವುದೇ ಧರ್ಮ ರಕ್ಷಣೆ. ಹಿಂದೂ-ಮುಸ್ಲಿಂ-ಕ್ರೈಸ್ತ ಹೀಗೆ ಎಲ್ಲಾ ಧರ್ಮದಲ್ಲೂ ಎಷ್ಟೋ ಯುವಕರು ಇಂದು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಾರೆ.ಅಂತವರನ್ನು ಕಂಡುಹಿಡಿದು ಅವರಿಗೆ ಮನವರಿಕೆಯಾಗುವ ರೀತಿಯಲ್ಲಿ ಉತ್ತಮ ಉಪದೇಶವನ್ನು ನೀಡಿ ಅವರನ್ನು ಸರಿದಾರಿಗೆ ತರುವುದೇ ಧರ್ಮ ರಕ್ಷಣೆ. ಇನ್ನೂ ಹಲವಾರು ಉತ್ತಮವಾದ ಕಾರ್ಯಗಳನ್ನು ಮಾಡುವುದರ ಮೂಲಕ ಜನರ ಮನಸ್ಸಿನಲ್ಲಿ ಮಾನವೀಯತೆಯ ಸಂಕೇತ ಹಾಗೂ ಪರಸ್ಪರ ಬಾಂಧವ್ಯ ಮೂಡಿಸುವುದೇ ಧರ್ಮ ರಕ್ಷಣೆ . ಇದನ್ನೆಲ್ಲಾ ಅರ್ಥೈಸಿಕೊಳ್ಳದೆ, ಧರ್ಮ ರಕ್ಷಣೆ ಎಂಬ ಪರಿಕಲ್ಪನೆಯನ್ನು ತಪ್ಪಾದ ದಾರಿಯಲ್ಲಿ ಕೊಂಡೊಯ್ಯಲಾಗುತ್ತದೆ. ಇದರ ಸಂಪೂರ್ಣ ಲಾಭವನ್ನು ರಾಜಕೀಯ ಪಕ್ಷಗಳು ಪಡೆದುಕೊಳ್ಳುತ್ತವೆ.

ರಾಜಕೀಯದಲ್ಲಿ ಯಾವತ್ತೂ ಧರ್ಮವನ್ನು ಎಳೆದು ತರಬಾರದು. ರಾಜಕಾರಣಿಗಳು ತಮ್ಮ ತಮ್ಮ ಆಡಳಿತವನ್ನು ರಾಜಕೀಯ ದೃಷ್ಟಿಯಿಂದ ಮಾತ್ರ ನೋಡಬೇಕು. ಹಾಗಿದ್ದಲ್ಲಿ ಮಾತ್ರ ರಾಜಕೀಯ ವ್ಯವಸ್ಥೆಗೆ ಒಂದು ಅರ್ಥಪೂರ್ಣ ಸಂದೇಶ ಸಿಗಬಹುದು. ಇಲ್ಲವಾದಲ್ಲಿ ಮುಂದೊಂದು ದಿನ ಧರ್ಮದ ಎಲ್ಲಾ ಆಚಾರ – ವಿಚಾರಗಳು ರಾಜಕೀಯ ಪಕ್ಷಗಳ ನಿಯಂತ್ರಣಕ್ಕೆ ಒಳಗಾಗಬಹುದು.

ಕೊನೆಯದಾಗಿ ನನ್ನ ಎಲ್ಲಾ ಹಿಂದೂ-ಮುಸ್ಲಿಂ-ಕ್ರೈಸ್ತ ಸಹೋದರರಲ್ಲಿ ವಿನಂತಿಯೇನೆಂದರೆ, ರಾಜಕೀಯವನ್ನು ರಾಜಕೀಯ ದೃಷ್ಟಿಯಿಂದ ಮಾತ್ರ ಪರಿಗಣಿಸಿ, ಪ್ರತಿಯೊಂದು ಧರ್ಮವನ್ನು ಪ್ರೀತಿಸಿ , ಅದರ ಸಂಸ್ಕೃತಿಯನ್ನು ಗೌರವಿಸುವುದರ ಮೂಲಕ ಈ ಭವ್ಯ ಭಾರತದಲ್ಲಿ ಮಾನವೀಯರಾಗಿ ಬದುಕೋಣ.

!!!!ಜೈ ಹಿಂದ್, ಜೈ ಕರ್ನಾಟಕ!!!!!

✍ಹಸೈನಾರ್ ಕಾಟಿಪಳ್ಳ

error: Content is protected !! Not allowed copy content from janadhvani.com