janadhvani

Kannada Online News Paper

ರಿಯಾದ್: ಅಲಿಫ್ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಪುಸ್ತಕ ರಚನೆ; ಗಿನ್ನೆಸ್ ವಿಶ್ವ ದಾಖಲೆಯ ಇತಿಹಾಸ

ರಿಯಾದ್ (ಸೌದಿ ಅರೇಬಿಯಾ): ಅನಿವಾಸಿ ಕನ್ನಡಿಗರು ವಿದೇಶಿ ನೆಲದಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿದ್ದಾರೆ ಎಂಬುದಕ್ಕೆ ರಿಯಾದ್‌ನ ಅಲಿಫ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿ. ಶಾಲೆಯು ಹಮ್ಮಿಕೊಂಡಿದ್ದ ‘ಬುಕ್ ಬ್ಲೂಮ್ 500’ (Book Bloom 500) ಅಭಿಯಾನದ ಭಾಗವಾಗಿ 6ನೇ ತರಗತಿಯ ವಿದ್ಯಾರ್ಥಿನಿಯರಾದ ಫಾತಿಮತ್ ಆಫಿಯಾ ಮತ್ತು ಐಷತ್ ಅಜೀಫಾ ಕನ್ನಡದಲ್ಲಿ ಪುಸ್ತಕಗಳನ್ನು ರಚಿಸುವ ಮೂಲಕ ಸೃಜನಶೀಲ ಬರವಣಿಗೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಕಳೆದ ಜನವರಿ 23 ಶುಕ್ರವಾರ ಸಂಜೆ ರಿಯಾದಿನ ಶಿಫಾ’ದ ಖಸ್ರ್ ಅಲ್ ಅಮೀರಿ ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶಾಲೆಯ ಒಟ್ಟು 1200 ವಿದ್ಯಾರ್ಥಿಗಳ ಪೈಕಿ 500 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಈ ಬೃಹತ್ ಸೃಜನಶೀಲ ಬರವಣಿಗೆಯ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಬೃಹತ್ ಬರವಣಿಗೆಯ ಪಾಠವು (Largest Creative Writing Lesson) ಈಗ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. ಈ ಮೂಲಕ ಅಲಿಫ್ ಇಂಟರ್ನ್ಯಾಷನಲ್ ಸ್ಕೂಲ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದೆ. “ನಮ್ಮ ವಿದ್ಯಾರ್ಥಿಗಳು ವಿದೇಶದಲ್ಲೂ ಕನ್ನಡದಲ್ಲಿ ಪುಸ್ತಕ ಬರೆದು ಸಮುದಾಯವು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ,” ಎಂದು ಅವರ ತರಗತಿ ಶಿಕ್ಷಕಿ ಶ್ರೀಮತಿ ಸುಂದುಸ್ ಸಬೀರ್ ಚೌಧರಿ ಪ್ರಶಂಸಿಸಿದ್ದಾರೆ.

ಈ ಸಾಧಕ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಲಂಜಿಬೈಲ್ ನಿವಾಸಿ, ಅಲಿಫ್ ಶಾಲೆಯ ಸಾರಿಗೆ ಮೇಲ್ವಿಚಾರಕರಾದ ಶ್ರೀ ಯೂಸುಫ್ ಉಸ್ಮಾನ್ ಕೆ.ವಿ. ಮತ್ತು ಶ್ರೀಮತಿ ರೈಹಾನಾ ದಂಪತಿಗಳ ಪುತ್ರಿಯರು. ಯೂಸುಫ್ ಉಸ್ಮಾನ್ ಅವರು ಕಳೆದ 34 ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, 16 ವರ್ಷಗಳಿಂದ ಅಲಿಫ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲಿಫ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕ್ಯಾಲಿಕಟ್‌ನ ನಾಲೆಡ್ಜ್ ಸಿಟಿಯ ಆರಂಭಿಕ ಹೂಡಿಕೆದಾರರಲ್ಲಿ ಇವರು ಪ್ರಮುಖರು.

ಈ ಕುಟುಂಬವು ವಿದೇಶದಲ್ಲೂ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುತ್ತಿದೆ. ಯೂಸುಫ್ ಉಸ್ಮಾನ್ ಅವರ ಪುತ್ರಿಯರಾದ ಶ್ರೀ ಅಶ್ರಿಫಾ ಬಾನು ಮತ್ತು ಕೆ.ವಿ. ಆಶಿಕಾ ಬಾನು ಅವರು ಕೂಡ ಇದೇ ಶಾಲೆಯಲ್ಲಿ ಕನ್ನಡ ಶಿಕ್ಷಕಿಯರಾಗಿ ಕಾರ್ಯನಿರ್ವಹಿಸುತ್ತಿದ್ದು, ತಂಗಿಯರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕನ್ನಡದ ಬಾವುಟ ಹಾರಿಸಿದ ಈ ಪುಟ್ಟ ಪ್ರತಿಭೆಗಳ ಸಾಧನೆಯು ಕನ್ನಡಿಗರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂದ ದೊಡ್ಡ ಗೌರವವಾಗಿದೆ.