janadhvani

Kannada Online News Paper

ಇಸ್ರೇಲ್ ಸಚಿವ ಬೆನ್ ಗ್ವಿರ್, ನೆತನ್ಯಾಹು ಸಹೋದರ ಸಾವು?- ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಹಾವಳಿ!

ಆದರೆ, ಈ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ ಮತ್ತು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಇದನ್ನು ವರದಿ ಮಾಡಿಲ್ಲ.

ಟೆಲ್ ಅವೀವ್ : ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದ ಯುದ್ಧವು 11ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನಲ್ಲಿ ಪುಟ್ಟ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರನ್ನು ಬಲಿ ಪಡೆದ ಭೀಕರ ದಾಳಿಯನ್ನು ಇಸ್ರೇಲ್ ಮತ್ತು ಅಮೆರಿಕ ನಡೆಸಿವೆ. ಇದಕ್ಕೆ ಪ್ರತಿಕಾರವಾಗಿ ಇರಾನ್, ಇಸ್ರೇಲ್ ಹಾಗೂ ಈ ಭಾಗದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಪ್ರಬಲ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇಸ್ರೇಲ್ ಅನ್ನು ಬೆಚ್ಚಿಬೀಳಿಸುವಂತೆ ಟೆಲ್ ಅವೀವ್ ಸೇರಿದಂತೆ ಹಲವು ಕಡೆಗಳಲ್ಲಿ ಇರಾನ್ ದಾಳಿ ಮಾಡಿದೆ.

ಈ ದಾಳಿಗಳಲ್ಲಿ ಇಸ್ರೇಲ್ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹೋದರ ಈದೋ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಈಗ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ ಮತ್ತು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಇದನ್ನು ವರದಿ ಮಾಡಿಲ್ಲ.

ಇಟಾಮರ್ ಬೆನ್ ಗ್ವಿರ್ ಮತ್ತು ಈದೋ ನೆತನ್ಯಾಹು ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಕೆಲವು ಇರಾನಿ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿವೆ. ತೆಲ್ ಅವೀವ್‌ನಲ್ಲಿರುವ ಬೆನ್ ಗ್ವಿರ್ ಅವರ ಮನೆಯ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ದಾಳಿಯಲ್ಲಿ ಬೆನ್ ಗ್ವಿರ್ ಅವರಿಗೆ ಕೇವಲ ಗಾಯಗಳಾಗಿವೆ ಎಂದು ಕೆಲವು ಪೋಸ್ಟ್‌ಗಳು ಹೇಳುತ್ತಿದ್ದರೆ, ಇಸ್ರೇಲಿ ಮಾಧ್ಯಮಗಳು ಇದನ್ನು ಕಾರು ಅಪಘಾತದಲ್ಲಿ ಸಂಭವಿಸಿದ ಗಾಯಗಳೆಂದು ಬಿಂಬಿಸುತ್ತಿವೆ ಎಂದು ಇನ್ನು ಕೆಲವು ಪೋಸ್ಟ್‌ಗಳು ಆರೋಪಿಸಿವೆ. ಆದರೆ, ಸಚಿವರ ಮನೆಯ ಮೇಲೆ ದಾಳಿ ನಡೆದಿರುವ ಬಗ್ಗೆ ಅಥವಾ ಅವರ ಮರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈದೋ ನೆತನ್ಯಾಹು ಅವರ ಸಾವಿನ ಸುದ್ದಿಯೂ ಇಂತಹುದೇ ದೃಢೀಕರಿಸದ ವದಂತಿಗಳಿಂದ ಕೂಡಿದೆ. ನೆತನ್ಯಾಹು ಅವರ ಕುಟುಂಬದ ನಿವಾಸದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಈದೋ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಪ್ರತಿಪಾದಿಸಿದೆ. ದಾಳಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋಗಳೂ ಹರಿದಾಡುತ್ತಿವೆಯಾದರೂ ಅವುಗಳಿಗೆ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮ್ನಈ ಕೊಲ್ಲಲ್ಪಟ್ಟ ನಂತರವೇ, ಇಸ್ರೇಲ್‌ನ ಪ್ರಮುಖ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಹರಡಲಾರಂಭಿಸಿದವು. ಇರಾನ್ ದಾಳಿಯಿಂದ ಇಸ್ರೇಲ್‌ನ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿಯಾಗಿದ್ದರೂ, ಸಚಿವರಾಗಲಿ ಅಥವಾ ನೆತನ್ಯಾಹು ಕುಟುಂಬದ ಸದಸ್ಯರಾಗಲಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ ಎಂದು ವಿವಿಧ ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್‌ಗಳು ತಿಳಿಸಿವೆ.