ಟೆಹ್ರಾನ್: ಅಮೆರಿಕ ಸೇನೆಯ ಬಾಂಬ್ ದಾಳಿಯಲ್ಲಿ ಹತರಾದ ಮಿನಾಬ್ ಶಾಲೆಯ ಹಸುಗೂಸುಗಳ ಚಿತ್ರಗಳನ್ನು ಮುಖಪುಟದ ತುಂಬೆಲ್ಲಾ ಪ್ರಕಟಿಸುವ ಮೂಲಕ ಇರಾನ್‌ನ ಪ್ರಮುಖ ದಿನಪತ್ರಿಕೆ ‘ತೆಹ್ರಾನ್ ಟೈಮ್ಸ್’ ವಿಭಿನ್ನವಾಗಿ ಪ್ರತಿಭಟಿಸಿದೆ. “ಟ್ರಂಪ್, ಈ ಮಕ್ಕಳ ಕಣ್ಣುಗಳನ್ನು ಒಮ್ಮೆ ನೋಡು” ಎಂಬ ಬೃಹತ್ ಶೀರ್ಷಿಕೆಯೊಂದಿಗೆ ಈ ಭಾವಚಿತ್ರಗಳನ್ನು ವಿನ್ಯಾಸಗೊಳಿಸಲಾಗಿದೆ.

ಶಾಲೆಯ ಮೇಲಿನ ಸ್ಫೋಟಕ್ಕೆ ಇರಾನ್ ಜವಾಬ್ದಾರಿ ಎಂಬ ಅಮೆರಿಕ ಅಧ್ಯಕ್ಷರ ವಾದಕ್ಕೆ ಈ ಮೂಲಕ ಪತ್ರಿಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಅತ್ಯಂತ ದುಃಖದಾಯಕವಾಗಿರುವ ಈ ಮುಖಪುಟವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮೆರಿಕದ ದಾಳಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಫೆಬ್ರವರಿ 28ರಂದು ದಕ್ಷಿಣ ಇರಾನ್‌ನ ಮಿನಾಬ್ ನಗರದ ಪ್ರಾಥಮಿಕ ಶಾಲೆಯ ಮೇಲೆ ನಡೆದ ಭೀಕರ ದಾಳಿಯಲ್ಲಿ ಕನಿಷ್ಠ 150 ಮಕ್ಕಳು ಮೃತಪಟ್ಟಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಸತ್ಯ ಮರೆಮಾಚುತ್ತಿರುವ ಟ್ರಂಪ್: ಸಂಪಾದಕೀಯ ವರದಿ
ಇರಾನ್ ಮೇಲಿನ ಸೈನ್ಯಾಕ್ರಮಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ಸುಳ್ಳಿನ ಕಂತೆ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. “ಟ್ರಂಪ್ ತಮ್ಮ ಕ್ರೌರ್ಯದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಮತ್ತು ರಾಜತಾಂತ್ರಿಕ ಪರಿಹಾರಗಳನ್ನು ಸೊಕ್ಕಿನಿಂದ ತಿರಸ್ಕರಿಸುತ್ತಿದ್ದಾರೆ” ಎಂದು ಪತ್ರಿಕೆ ಆಕ್ರೋಶ ಹೊರಹಾಕಿದೆ.
ಅಮೆರಿಕದ ವಾದ ಮತ್ತು ವಸ್ತುಸ್ಥಿತಿ
ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಶನಿವಾರ ಟ್ರಂಪ್ ಆರೋಪಿಸಿದ್ದರು. “ಇರಾನ್ ತನ್ನದೇ ಶಸ್ತ್ರಾಸ್ತ್ರಗಳನ್ನು ಬಳಸಿ ಈ ಕೃತ್ಯ ಎಸಗಿದೆ, ಅವರಿಗೆ ಯಾವುದೇ ಗುರಿ ಅಥವಾ ನಿಖರತೆ ಇಲ್ಲ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಅಮೆರಿಕದ ಪ್ರತಿಷ್ಠಿತ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ನಡೆಸಿದ ತನಿಖೆಯಲ್ಲಿ, ಈ ದಾಳಿಯನ್ನು ಅಮೆರಿಕ ಸೇನೆಯೇ ನಡೆಸಿದೆ ಎಂಬ ಸಂಶಯಾಸ್ಪದ ಅಂಶಗಳು ಹೊರಬಂದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದರು.
ಬೆಲ್ಲಿಂಗ್ ಕ್ಯಾಟ್ ಬಹಿರಂಗಪಡಿಸಿದ ಸಾಕ್ಷ್ಯ
ಡಚ್ ಮೂಲದ ಸತ್ಯಶೋಧನಾ ಸಂಸ್ಥೆ ‘ಬೆಲ್ಲಿಂಗ್ ಕ್ಯಾಟ್’ (Bellingcat) ಈ ಬಗ್ಗೆ ಮಹತ್ವದ ಪುರಾವೆಗಳನ್ನು ಬಿಡುಗಡೆ ಮಾಡಿದೆ. ದಾಳಿ ನಡೆದ ಸ್ಥಳದಲ್ಲಿ ಅಮೆರಿಕ ನಿರ್ಮಿತ ‘ಟೊಮಾಹಾಕ್ ಕ್ರೂಸ್ ಮಿಸೈಲ್’ ಪತ್ತೆಯಾಗಿದೆ ಎಂದು ಅದು ವರದಿ ಮಾಡಿದೆ.
“ಟೊಮಾಹಾಕ್ ಕ್ಷಿಪಣಿಗಳು ಕೇವಲ ಅಮೆರಿಕದ ಬಳಿ ಮಾತ್ರ ಇವೆ. ಇಸ್ರೇಲ್ ಬಳಿಯೂ ಇವು ಇರುವ ಬಗ್ಗೆ ಮಾಹಿತಿಯಿಲ್ಲ. ಶಾಲೆಯ ಮೇಲೆ ಬಿದ್ದಿರುವುದು ಇದೇ ಕ್ಷಿಪಣಿ ಎಂಬುದಕ್ಕೆ ಮೂರು ಸೆಕೆಂಡ್‌ಗಳ ವಿಡಿಯೋ ಸಾಕ್ಷಿಯಿದೆ,” ಎಂದು ಸಂಶೋಧಕ ಟ್ರೆವರ್ ಬಾಲ್ ತಿಳಿಸಿದ್ದಾರೆ.
ಈ ಸಾಕ್ಷ್ಯಗಳು ಅಧ್ಯಕ್ಷ ಟ್ರಂಪ್ ಅವರ ವಾದವನ್ನು ಸಂಪೂರ್ಣವಾಗಿ ಸುಳ್ಳಾಗಿಸಿವೆ. ಇರಾನ್ ಮೇಲೆ ಗೂಬೆ ಕೂರಿಸುವ ಅಮೆರಿಕದ ಪ್ರಯತ್ನಕ್ಕೆ ಈಗ ತಾಂತ್ರಿಕ ಸಾಕ್ಷ್ಯಗಳೇ ಮುಳುವಾಗಿವೆ.







