janadhvani

Kannada Online News Paper

ಖಮಾನೈ ಅವರ ಪುತ್ರನನ್ನು ಒಪ್ಪುವುದಿಲ್ಲ; ಉತ್ತರಾಧಿಕಾರಿಯ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತೇನೆ- ಟ್ರಂಪ್

ಇರಾನ್ ಆಡಳಿತದಲ್ಲೂ ಅಮೆರಿಕದ ಪ್ರಭಾವ ಇರಬೇಕೆಂಬ ತನ್ನ ಆಕಾಂಕ್ಷೆಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ

ವಾಷಿಂಗ್ಟನ್: ವೆನೆಜುವೆಲಾದ ರಾಜಕೀಯ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡಿದ ಮಾದರಿಯಲ್ಲೇ, ಇರಾನ್ ಆಡಳಿತದಲ್ಲೂ ಅಮೆರಿಕದ ಪ್ರಭಾವ ಇರಬೇಕೆಂಬ ತನ್ನ ಆಕಾಂಕ್ಷೆಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಯುಎಸ್-ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮಾನೈ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತಾವು ಸಕ್ರಿಯವಾಗಿ ಭಾಗಿಯಾಗುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಖಮನೈ ಅವರ ಪುತ್ರ ಮುಜ್ತಬಾ ಖಮನೈ ಅವರನ್ನು ಮುಂದಿನ ಆಡಳಿತಗಾರನನ್ನಾಗಿ ಮಾಡುವುದಕ್ಕೆ ತಮ್ಮ ತೀವ್ರ ವಿರೋಧವಿದೆ ಎಂದಿದ್ದಾರೆ.

“ಅವರು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಖಮೇನಿ ಪುತ್ರ ಒಬ್ಬ ಸಾಮಾನ್ಯ ವ್ಯಕ್ತಿತ್ವದವರು ಮತ್ತು ಆಡಳಿತಕ್ಕೆ ಅಸಮರ್ಥ. ಅವರು ನನಗೆ ಒಪ್ಪಿಗೆಯಿಲ್ಲ. ಇರಾನ್‌ನಲ್ಲಿ ಶಾಂತಿ ಮತ್ತು ಏಕತೆಯನ್ನು ತರುವಂತಹ ವ್ಯಕ್ತಿ ನಮಗೆ ಬೇಕು. ವೆನೆಜುವೆಲಾದಲ್ಲಿ ಮಡುರೊ ಅವರನ್ನು ಬದಲಿಸಿ ಡೆಲ್ಸಿ ರೊಡ್ರಿಗಸ್ ಅವರನ್ನು ಆಯ್ಕೆ ಮಾಡಿದಂತೆ, ಇರಾನ್‌ನ ಹೊಸ ನಾಯಕನ ನೇಮಕದಲ್ಲೂ ನಾನು ಪಾಲುದಾರನಾಗಲಿದ್ದೇನೆ,” ಎಂದು ಟ್ರಂಪ್ ಅಕ್ಷಿಯೋಸ್ (Axios) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಾಮರ್ಥ್ಯದ ಪ್ರಶ್ನೆ ಎತ್ತಿದ ಟ್ರಂಪ್

ಆಯತೊಲ್ಲಾ ಖಮನೈ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡದಿರಲು ಆವರ ಅಸಮರ್ಥತೆಯೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ. “ಇರಾನ್‌ನ ಭವಿಷ್ಯದ ಸರ್ಕಾರದಲ್ಲಿ ನನ್ನ ಪ್ರಭಾವ ದೊಡ್ಡದಾಗಿರುತ್ತದೆ. ಇಲ್ಲದಿದ್ದರೆ ಯಾವುದೇ ಒಪ್ಪಂದವೂ ನಡೆಯುವುದಿಲ್ಲ. ನಾವು ಈ ಹಿಂದೆ ಮಾಡಿದ್ದನ್ನೇ ಮತ್ತೆ ಮಾಡಲು ಬಯಸುವುದಿಲ್ಲ. ಇರಾನ್ ಅನ್ನು ಅಣ್ವಸ್ತ್ರ ಮುಕ್ತವಾಗಿಸಿ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ವ್ಯಕ್ತಿ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ನಾವು ಅಲ್ಲಿನ ಜನತೆ ಮತ್ತು ಆಡಳಿತದೊಂದಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.

ಉತ್ತರಾಧಿಕಾರಿಗಾಗಿ ಹುಡುಕಾಟ

ಖಮೇನಿ ಅವರ ನಿಧನದ ನಂತರ ಇರಾನ್‌ನ ಮುಂದಿನ ಪರಮೋಚ್ಚ ನಾಯಕ ಯಾರು ಎಂಬ ಚರ್ಚೆ ಜಾಗತಿಕವಾಗಿ ತೀವ್ರಗೊಂಡಿದೆ. ಮೂರು ದಶಕಗಳ ಕಾಲ ಇರಾನ್ ಅನ್ನು ಮುನ್ನಡೆಸಿದ್ದ ಖಮೇನಿ ಅವರ ನಂತರ, ಅವರ ಪುತ್ರ ಮುಜ್ತಬಾ ಖಮೇನಿ ಅವರ ಹೆಸರು ಮುಂಚೂಣಿಯಲ್ಲಿದೆ. ಸದ್ಯ ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (ಮಜ್ಲಿಸ್ ಖುಬ್ರಾ) ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಪ್ರಮುಖ ಆಕಾಂಕ್ಷಿಗಳು:

  • ಮುಜ್ತಬಾ ಖಮಾನೈ: ಖಮಾನೈ ಅವರ ಪುತ್ರ (ಪ್ರಸ್ತುತ ಮುಂಚೂಣಿಯಲ್ಲಿರುವ ಹೆಸರು).
  • ಅಸ್ಗರ್ ಹಿಜಾಜಿ: ಖಮಾನೈ ಅವರ ಮಾಜಿ ಡೆಪ್ಯುಟಿ ಚೀಫ್.
  • ಅಲಿ ಲಾರಿಜಾನಿ: ಪ್ರಭಾವಿ ಮಿಲಿಟರಿ ನಾಯಕ.
  • ಹಸನ್ ಖುಮೈನಿ: ಅಯತುಲ್ಲಾಹಕ ರೂಹುಲ್ಲಾಹ್ ಖುಮೈನಿ ಅವರ ಮೊಮ್ಮಗ.

ಟ್ರಂಪ್ ಅವರ ಈ ನೇರ ಹಸ್ತಕ್ಷೇಪದ ಹೇಳಿಕೆಯು ಪಶ್ಚಿಮ ಏಷ್ಯಾದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇರಾನ್ ಈ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.