ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಪರ್ಷಿಯನ್ ಕೊಲ್ಲಿಯ ಉತ್ತರ ಭಾಗದಲ್ಲಿ ಅಮೆರಿಕದ ತೈಲ ನೌಕೆಯ ಮೇಲೆ ತಾನು ದಾಳಿ ಮಾಡಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದೆ. ದಾಳಿಯ ಬೆನ್ನಲ್ಲೇ ಹಡಗು ಬೆಂಕಿಗಾಹುತಿಯಾಗಿದೆ ಎಂದು ಇರಾನ್‌ನ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ನಡೆದ ಈ ದಾಳಿಯಲ್ಲಿ ಉಂಟಾದ ಸಾವು-ನೋವು ಅಥವಾ ಹಾನಿಯ ಕುರಿತು ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಸೇಡಿನ ಕಿಚ್ಚು: ಐರಿಸ್ ದೆನಾ ನೌಕೆ ಮುಳುಗಡೆಗೆ ಪ್ರತಿಕಾರ
ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆಯ ಮೇಲೆ ಅಮೆರಿಕ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಈ ತಿರುಗೇಟು ನೀಡಿದೆ. ಶ್ರೀಲಂಕಾದ ದಕ್ಷಿಣ ಕರಾವಳಿಯ ಸಮೀಪ ಅಮೆರಿಕದ ಜಲಂತರ್ಗಾಮಿ ನೌಕೆಯು ಇರಾನ್‌ನ ‘ಐರಿಸ್ ದೆನಾ’ (IRIS Dena) ಯುದ್ಧನೌಕೆಯನ್ನು ಟಾರ್ಪಿಡೊ ಮೂಲಕ ಹೊಡೆದು ಉರುಳಿಸಿತ್ತು.
ವಿಶೇಷವೆಂದರೆ, ಎರಡನೇ ಮಹಾಯುದ್ಧದ ನಂತರ ಅಮೆರಿಕವು ಶತ್ರು ರಾಷ್ಟ್ರದ ನೌಕೆಯೊಂದನ್ನು ಟಾರ್ಪಿಡೊ ಬಳಸಿ ಮುಳುಗಿಸಿರುವುದು ಇದೇ ಮೊದಲು. ಈ ಘಟನೆಯ ನಂತರ, “ಅಮೆರಿಕ ತನ್ನ ಕೃತ್ಯಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಮತ್ತು ಈ ಬಗ್ಗೆ ವಿಷಾದಿಸುವಂತೆ ಮಾಡುತ್ತೇವೆ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಎಚ್ಚರಿಸಿದ್ದರು.
ಭಾರತದ ‘ಮಿಲನ್’ ಸಮರಾಭ್ಯಾಸ ಮುಗಿಸಿ ಮರಳುತ್ತಿದ್ದ ನೌಕೆ
ಫೆಬ್ರವರಿ 18 ರಿಂದ 25 ರವರೆಗೆ ವಿಶಾಖಪಟ್ಟಣದಲ್ಲಿ ನಡೆದ ‘ಮಿಲನ್’ ಅಂತರಾಷ್ಟ್ರೀಯ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಭಾರತೀಯ ನೌಕಾಪಡೆಯ ಅತಿಥಿಯಾಗಿ ಬಂದಿದ್ದ ನೌಕೆಯ ಮೇಲೆ ಯಾವುದೇ ಮುನ್ಸೂಚನೆ ಇಲ್ಲದೆ ಅಮೆರಿಕ ದಾಳಿ ಮಾಡಿದೆ ಎಂದು ಇರಾನ್ ಆರೋಪಿಸಿದೆ. ನೌಕೆಯಲ್ಲಿದ್ದ ಸುಮಾರು 130 ನಾವಿಕರಲ್ಲಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಸುಮಾರು 30 ನಾವಿಕರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದ್ದು, ಅವರನ್ನು ದಕ್ಷಿಣದ ಬಂದರು ನಗರವಾದ ಗಾಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಾಗತಿಕ ಆತಂಕ ಮತ್ತು ಸಾವು-ನೋವು
ಈವರೆಗಿನ ಸಂಘರ್ಷದಲ್ಲಿ ಇರಾನ್‌ನ ಸುಮಾರು 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಆರು ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಡ್ರೋನ್ ಉಡಾವಣೆಗೆ ಬಳಸುತ್ತಿದ್ದ ಇರಾನ್‌ನ ಕಂಟೇನರ್ ಹಡಗುಗಳ ಮೇಲೂ ಅಮೆರಿಕ ಇತ್ತೀಚೆಗೆ ದಾಳಿ ನಡೆಸಿತ್ತು. ಗಲ್ಫ್ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಸಂಘರ್ಷ ಈಗ ಭಾರತದ ನೆರೆಹೊರೆಯಾದ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿರುವುದು ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿದೆ. ತೈಲ ನೌಕೆಯ ಮೇಲಿನ ಇಂದಿನ ದಾಳಿಯ ಕುರಿತು ಅಮೆರಿಕ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.






