janadhvani

Kannada Online News Paper

ಸಿಹಿ ಸುದ್ದಿ: ಈ ಬಾರಿ ಐದು ದಿನಗಳ ಸುದೀರ್ಘ ಈದ್ ರಜೆ ಸಾಧ್ಯತೆ

ಆದರೆ, ಔಖಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಚಂದ್ರ ದರ್ಶನದ ನಂತರವಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.

ಮಸ್ಕತ್: ಈ ವರ್ಷದ ಈದ್ ಅಲ್-ಫಿತರ್ ಆಚರಣೆಯ ಸಂಭ್ರಮದಲ್ಲಿ ಒಮಾನ್ ನಿವಾಸಿಗಳು ಹಾಗೂ ವಲಸಿಗರಿಗೆ ಈ ಬಾರಿ ಸತತ ಐದು ದಿನಗಳ ಸುದೀರ್ಘ ರಜೆ ಲಭಿಸುವ ಸಾಧ್ಯತೆಯಿದೆ. ಖಗೋಳ ಶಾಸ್ತ್ರದ ಲೆಕ್ಕಾಚಾರಗಳು ಮತ್ತು ಒಮಾನ್‌ನ ರಜಾ ನಿಯಮಗಳನ್ನು ವಿಶ್ಲೇಷಿಸಿದರೆ, ಮಾರ್ಚ್ 19ರಿಂದ ಮಾರ್ಚ್ 23ರವರೆಗೆ ರಜೆ ದೊರೆಯುವ ನಿರೀಕ್ಷೆಯಿದೆ.

ಲೆಕ್ಕಾಚಾರ ಹೀಗಿದೆ:

ಒಮಾನ್‌ನಲ್ಲಿ ಫೆಬ್ರವರಿ 19ರಿಂದ ರಂಜಾನ್ ಆರಂಭವಾಗಿದ್ದು, ಮಾರ್ಚ್ 19 ಗುರುವಾರ (ರಂಜಾನ್ 29) ಚಂದ್ರ ದರ್ಶನ ವೀಕ್ಷಣೆ ನಡೆಯಲಿದೆ. ಒಮಾನ್ ನಿಯಮದಂತೆ ರಂಜಾನ್ 29ರಿಂದ ಶವ್ವಾಲ್ 3ರವರೆಗೆ ಈದ್ ರಜೆ ಇರುತ್ತದೆ. ಖಗೋಳ ಶಾಸ್ತ್ರದ ಪ್ರಕಾರ ಮಾರ್ಚ್ 20 ಶುಕ್ರವಾರ ಈದ್ ಬರುವ ಸಾಧ್ಯತೆಯಿದ್ದು, ಈದ್‌ನ ಮೊದಲ ದಿನ ಶುಕ್ರವಾರ ಅಥವಾ ಶನಿವಾರ ಬಂದರೆ ಹೆಚ್ಚುವರಿ ಒಂದು ದಿನದ ರಜೆ ನೀಡುವ ನಿಯಮ ಒಮಾನ್‌ನಲ್ಲಿದೆ. ಇದರನ್ವಯ ಮಾರ್ಚ್ 23 ಸೋಮವಾರದವರೆಗೂ ರಜೆ ವಿಸ್ತರಣೆಯಾಗಲಿದ್ದು, ಒಟ್ಟು 5 ದಿನಗಳ ರಜೆ ಸಿಗಲಿದೆ.

ಆದರೆ, ಔಖಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಚಂದ್ರ ದರ್ಶನದ ನಂತರವಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.

ಯುಎಇಯಲ್ಲಿ ನಾಲ್ಕು ದಿನ ರಜೆ:

ಇದೇ ವೇಳೆ, ಯುಎಇ ಸರ್ಕಾರವು ಈಗಾಗಲೇ ತನ್ನ ನೌಕರರಿಗೆ ಮಾರ್ಚ್ 19 ಗುರುವಾರದಿಂದ ಮಾರ್ಚ್ 22 ಭಾನುವಾರದವರೆಗೆ ನಾಲ್ಕು ದಿನಗಳ ರಜೆಯನ್ನು ಘೋಷಿಸಿದೆ. ಖಾಸಗಿ ವಲಯಕ್ಕೆ ಸದ್ಯ ಶನಿವಾರದವರೆಗೆ ರಜೆ ನೀಡಲಾಗಿದ್ದು, ರಂಜಾನ್ 30 ದಿನ ಪೂರ್ಣಗೊಂಡರೆ ಅಲ್ಲಿಯೂ ಭಾನುವಾರದವರೆಗೆ ರಜೆ ಮುಂದುವರಿಯಲಿದೆ.