ಕೋಟಕ್ಕಲ್ | ಸಮಸ್ತವನ್ನು ತೊರೆದವರು ಹಿಂತಿರುಗಬೇಕು ಎಂಬ ಇ.ಕೆ. ಸಮಸ್ತದ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳರ ಹೇಳಿಕೆಯನ್ನು ಕಾಂತಪುರಂ ಉಸ್ತಾದರು ತಿರಸ್ಕರಿಸಿದರು. ಸುನ್ನಿಗಳು ಸಮಸ್ತವನ್ನು ತೊರೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೋಟಕ್ಕಲ್ ನ ಬಹ್ರುಲ್ ಉಲೂಮ್ ನಗರದಲ್ಲಿ ನಡೆದ ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ 100ನೇ ವಾರ್ಷಿಕ ಸಮ್ಮೇಳನದ ಘೋಷಣೆ ಸಮ್ಮೇಳನದಲ್ಲಿ ಸಮಸ್ತ ಪ್ರಧಾನ ಕಾರ್ಯದರ್ಶಿ ಕಾಂಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಸುನ್ನಿಗಳು ಸಮಸ್ತವನ್ನು ಬಿಟ್ಟುಹೋಗಿಲ್ಲ. ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಚರ್ಚೆಯ ವೇಳೆ ಸಭೆಯಿಂದ ಹೊರನಡೆದರೆ ಸದಸ್ಯತ್ವ ಕಳೆದುಕೊಂಡಂತಾಗುವುದಿಲ್ಲ, ಅದೇ ರೀತಿಯಾಗಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಿಂದ ನಾವು ದೂರವಾಗಿಲ್ಲ. ಸಮಸ್ತದ ಐಕ್ಯತೆಗೆ ನಾವು ಸದಾ ಸಿದ್ಧರಾಗಿದ್ದೇವೆ’ ಎಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು. “ಆ ದಿನ ಚರ್ಚಿಸಲಾದ ವಿಷಯಗಳು ಹೊಸದಾಗಿ ಸದಸ್ಯತ್ವ ಪಡೆದವರಿಗೆ ತಿಳಿದಿರಲಿಕ್ಕಿಲ್ಲ. ಆದರೂ ಸೌಹಾರ್ದಯುತ ಸಂವಾದದ ಮೂಲಕ ತೀರ್ಮಾನ ಕೈಗೊಳ್ಳಬಹುದು. ಸಯ್ಯದರೂ ಉಲಮಾಗಳೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ 100ನೇ ವಾರ್ಷಿಕ ಸಮ್ಮೇಳನವು ಮಲಪ್ಪುರಂನ ವಾದಿ ಹರಮೈನಿಯಲ್ಲಿ, 2027 ಜನವರಿ 28, 29, 30 ಮತ್ತು 31 ರಂದು ‘ಸಮಸ್ತ 100 ಪ್ರಕಾಶ ವರ್ಷಗಳು’ ಎಂಬ ಥೀಮ್‌ನೊಂದಿಗೆ ನಡೆಯಲಿದೆ ಎಂದು ದಿನಾಂಕ ಮತ್ತು ಸ್ಥಳವನ್ನು ಘೋಷಿಸಿದರು.
ಸಯ್ಯಿದ್ ಅಲಿ ಬಾಫಕಿ ತಂಙಳವರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಸಮಸ್ತ ಅಧ್ಯಕ್ಷರಾದ ಇ.ಸುಲೈಮಾನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ, ಸಮಸ್ತ ಉಪಾಧ್ಯಕ್ಷರಾದ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಸಮಾರಂಭವನ್ನು ಉದ್ಘಾಟಿಸಿದರು.
ಸಮಸ್ತ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್,ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸಿ.ಮುಹಮ್ಮದ್ ಫೈಝಿ, ವಂಡೂರು ಅಬ್ದುಲ್ ರಹ್ಮಾನ್ ಫೈಝಿ, ಡಾ.ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ, ಅಬ್ದುಲ್ಲಾ ಅಹ್ಸನಿ ಚೆಙಾಣಿ, ಸುಲೈಮಾನ್ ಸಖಾಫಿ ಮಾಳಿಯೇಕ್ಕಲ್, ಅಬ್ದುಲ್ ಜಲೀಲ್ ಸಖಾಫಿ ಚೆರುಶೋಲ, ಅಲವಿ ಸಖಾಫಿ ಕೊಳತ್ತೂರು ಮಾತನಾಡಿದರು.
ಕೇರಳದ ವಿವಿಧ ಭಾಗಗಳಿಂದ ಆಯ್ಕೆಯಾದ ಹತ್ತು ಸಾವಿರ ವಿದ್ವಾಂಸರು ಮತ್ತು ಸಾವಿರಾರು ಸುನ್ನೀ ಕಾರ್ಯಕರ್ತರು ಘೋಷಣೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಐಕ್ಯತೆಗಾಗಿ ನಿರ್ಣಯ
ಸಮಸ್ತ ಕಾರ್ಯದರ್ಶಿ ಪೇರೋಡ್ ಅಬ್ದುರಹ್ಮಾನ್ ಸಖಾಫಿ ನಿರ್ಣಯ ಮಂಡಿಸಿ, ಸಮಾಜದ ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಬೆಳೆಸುವುದು ಕಾಲದ ಅಗತ್ಯವಾಗಿದ್ದು, ಸ್ವಂತ ಅಸ್ತಿತ್ವವನ್ನು ಉಳಿಸಿಕೊಂಡೇ ಪರಸ್ಪರ ಕೈಜೋಡಿಸುವುದರಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ದಾರಿ ತೆರೆದಿಡುತ್ತದೆ ಎಂದು ಹೇಳಿದರು.
ಎರಡು ಸಮಸ್ತಗಳ ನಡುವಿನ ಐಕ್ಯ ಚರ್ಚೆಗಳಿಗೆ ಈಗಾಗಲೇ ಎರಡು ಮುಶಾವರಗಳು ಮಾನ್ಯತೆ ನೀಡಿದೆ. ಹಿಂದಿನ ಸಂವಾದಗಳಲ್ಲಿ ಧನಾತ್ಮಕ ಫಲಿತಾಂಶಗಳ ಬಗ್ಗೆ ವಿಶ್ವಾಸ ವ್ಯಕ್ತವಾಗಿದ್ದು, ನಂಬಿಕೆ ಹಾಗೂ ಕರ್ಮಾಧಾರಿತ ಆದರ್ಶಗಳ ನೆಲೆಯಲ್ಲಿ ಸಮಸ್ತದ ಸ್ಥಾಪಿತ ಗುರಿಗಳೊಳಗಿನ ಐಕ್ಯತೆಯನ್ನು ಸಾಧಿಸಲು ಇನ್ನಷ್ಟು ಸಿದ್ಧತೆ ಅಗತ್ಯವಿದೆ ಎಂದರು.
ಮಾತು ಯಾ ವರ್ತನೆಗಳ ಮೂಲಕ ಐಕ್ಯತೆಗೆ ಧಕ್ಕೆ ತರುವ ಸಂವಹನಗಳು ಯಾರಿಂದಲೂ ನಡೆಯಬಾರದು ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಯಿತು. ವಿಕೃತ ಪರಿಕಲ್ಪನೆಗಳ ಪ್ರಚಾರ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಂಬಿಕೆ ಮತ್ತು ಆದರ್ಶಗಳ ಬಲದೊಂದಿಗೆ ಸ್ನೇಹಭಾವ ಬೆಳೆಸಿ ಜಗತ್ತಿನಾದ್ಯಂತ ಎಲ್ಲರನ್ನೂ ಒಗ್ಗೂಡಿಸುವಂತೆ ಮನವಿ ಮಾಡಲಾಯಿತು.






