janadhvani

Kannada Online News Paper

ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?

ಯುವ ಸಮೂಹವಿಂದು ರೀಲ್ಸ್ ಬದುಕಿಗಾಗಿ ರಿಯಲ್ ಬದುಕನ್ನು ಸಮಸ್ಯೆಯೊಳಗೆ ಬಂಧಿಯಾಗಿಸುತ್ತಿದ್ದಾರೆ.

✍🏻 ಸ್ನೇಹಜೀವಿ ಅಡ್ಕ

ಅದೆಂತಹ ಸಂಕೀರ್ಣ ಸಮಸ್ಯೆಗಳೇ ಬಂದರೂ ಮುಸ್ಲಿಮರು ಅದನ್ನು ನಿಭಾಯಿಸಿಕೊಳ್ಳುತ್ತಾರೆ.
ಆತ್ಮಹತ್ಯೆ ಪ್ರಕರಣಗಳಲ್ಲಿ ನಿಮ್ಮವರ ಸಂಖ್ಯೆ ತೀರಾ ವಿರಳ ಅಂತ ಇತ್ತೀಚಿನವರೆಗೂ ಇತರ ಧರ್ಮೀಯರು ಹೇಳುತ್ತಿದ್ದರು.
ಆದರೆ ಈಗ..?
ಕಳೆದ ಒಂದು ವಾರದೊಳಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯೊಳಗೆ ಮೂರು ಮುಸ್ಲಿಂ ಯುವಕರು ಆತ್ಮಹತ್ಯೆಗೈದರು!
ಮಾತಿನ ಮೂಲಕ ಮುಗಿಸಿಕೊಳ್ಳಬಹುದಾಗಿದ್ದ ಸಮಸ್ಯೆಗಳಿಗೂ ಯುವಕರು ಆತ್ಮಹತ್ಯೆ ಯನ್ನೇ ಅಂತಿಮ ಮಾರ್ಗವಾಗಿ ಕಂಡುಕೊಳ್ಳುತ್ತಿರುವುದು ದುರಂತ.

ಬಂಡೆಯಂತಹ ಸವಾಲುಗಳನ್ನೂ ದಿಟ್ಟವಾಗಿ ಎದುರಿಸಲು ಶಕ್ತವಾಗಿದ್ದವರು, ಇಂದು ಸಣ್ಣ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬ ಭ್ರಮೆಗೊಳಾಗಿರುವುದು ಆತಂಕದಾಯಕ.
ಯುವ ಸಮೂಹವಿಂದು ರೀಲ್ಸ್ ಬದುಕಿಗಾಗಿ ರಿಯಲ್ ಬದುಕನ್ನು ಸಮಸ್ಯೆಯೊಳಗೆ ಬಂಧಿಯಾಗಿಸುತ್ತಿದ್ದಾರೆ.

ಮದುವೆಯಾದ ಬಹುತೇಕ ದಾಂಪತ್ಯ ಬದುಕುಗಳೂ ಕೂಡ ಇಂದು ವಿರಸದತ್ತ ಸಾಗಿ ಒಂದಾದರೆ ಡೈವೋರ್ಸ್ ಇಲ್ಲವಾದರೆ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಸುಖಾಂತ್ಯವಾಗುವ ಸನ್ನಿವೇಶಗಳು ಅಧಿಕಗೊಳ್ಳುತ್ತಿದೆ.
ಯಾವುದೋ ತೋರಿಕೆಯ ಬದುಕಿಗಾಗಿ, ತಮ್ಮ ಇತಿಮಿತಿಗಳನ್ನೂ ಪರಿಗಣಿಸದೆ ಹಠಕ್ಕೆ ಬಿದ್ದು ಹಲವು ಸಂಸಾರಗಳು ನರಕಯಾತನೆ ಅನುಭವಿಸುತ್ತಿದೆ.

ಮದ್ರಸಾ ಶಿಕ್ಷಣ, ನೈತಿಕ ಬೋಧನೆಗಳೆಲ್ಲವೂ ಮದ್ರಸಾ ಮುಗಿಯುವುದೊರಳಗೆ ಅಲ್ಲಿಗೆ ಬಿಟ್ಟು ಬಂದಂತಿದೆ.
ಆಧ್ಯಾತ್ಮಿಕತೆ ಮರೀಚಿಕೆಯಾಗುತ್ತಿರುವಂತೆಯೇ ಸಣ್ಣ ಪುಟ್ಟ ಸಮಸ್ಯೆಗಳೂ ಬದುಕು ಮುಗಿಸಿ ಬಿಡುವ ಯೋಚನೆಯತ್ತ ಕೊಂಡೊಯ್ಯುತ್ತಿದೆ.
ಪ್ರೀತಿ, ಆನ್ಲೈನ್ ಆಟ, ಟ್ರೇಡಿಂಗ್, ಡ್ರಗ್ಸ್ ಇವುಗಳಲ್ಲಿ ಗಂಡು – ಹೆಣ್ಣೆಂಬ ಭೇದವಿಲ್ಲದೆ ನಮ್ಮ ಸಮುದಾಯದ ಯುವ ಜನತೆ ಬಲಿಪಶುಗಳಾಗುತ್ತಿದೆ.

ಜಾಗೃತಿ ಮೂಡಿಸಬೇಕಾದ ಜಮಾಅತ್ ಕಮಿಟಿಗಳು ಅಧಿಕಾರದ ಜಂಜಾಟದಲ್ಲಿ ಮುಳುಗಿ ಹೋಗಿದೆ.
ಬುದ್ಧಿ ಹೇಳಲೂ ಹೆತ್ತವರು ಭಯ ಪಡುವ ಸನ್ನಿವೇಶದಲ್ಲಿ ಪ್ರತಿಯೊಂದು ಮೊಹಲ್ಲಾ ವ್ಯಾಪ್ತಿಗಳಲ್ಲೂ ಯುವ ಜನತೆಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕಿದೆ.
ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಖಿನ್ನತೆಗೊಳಗಾಗಿ ಬದುಕು ಸಾಗಿಸುವ ಯುವ ಮನಸ್ಸುಗಳನ್ನು ಸಾಂತ್ವನಿಸುವ ಕೆಲಸಗಳು ನಡೆಯಬೇಕು.
ಜೀವ ಹೋದ ಮೇಲೆ ಕಣ್ಣೀರು ಸುರಿಸುವ ಬದಲು, ಜೀವವಿರುವಾಗಲೇ ಅವರ ನೋವಿಗೆ ಆಸರೆಯಾಗುವ ಪ್ರಯತ್ನ ನಡೆಸೋಣ.
ಆತ್ಮಹತ್ಯೆ ಯಾವುದೇ ಸಮಸ್ಯೆಗಳಿಗೂ ಪರಿಹಾರವಲ್ಲ.
ರೀಲ್ಸ್ ನ ಮೊರೆ ಹೋಗಿ, ಬಣ್ಣದ ಬದುಕಿನ ಕನಸುಗಳಿಗೆ ಅಂತ್ಯ ಹಾಕದಿರಿ ಜೋಕೆ!